ಚಾಮರಾಜನಗರ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಚಾಮರಾಜನಗರದ ರಾಮಸಮುದ್ರದಲ್ಲಿರುವ ಹರಳುಕೋಟೆ ಆಂಜನೇಯ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿದರು.
ಬೆಂಗಳೂರಿನಿಂದ ಮೈಸೂರಿಗೆ ವಾಯು ಮಾರ್ಗದ ಮೂಲಕ ಹಾಗೂ ಮೈಸೂರಿನಿಂದ ಚಾಮರಾಜನಗರಕ್ಕೆ ಝೀರೋ ಟ್ರಾಫಿಕ್ನಲ್ಲಿ ಬೊಬ್ಡೆ ಹಾಗೂ ಅವರ ಕುಟುಂಬದವರು ಹರಳುಕೋಟೆ ಆಂಜನೇಯ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಗರದ ಉದ್ಯಮಿಯೊಬ್ಬರ ಮನೆಯಲ್ಲಿ ಮಧ್ಯಾಹ್ನದ ಭೋಜನ ಸೇವಿಸಿ ಮೈಸೂರಿಗೆ ತೆರಳಲಿದ್ದು, ಎರಡು ದಿನ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ ಎಂದು ತಿಳಿದು ಬಂದಿದೆ.
ಬೊಬ್ಡೆ ಅವರ ಖಾಸಗಿ ಕಾರ್ಯಕ್ರಮವಾದ್ದರಿಂದ ಮಾಧ್ಯಮದವರಿಗೆ ಹಾಗೂ ಸಾರ್ವಜನಿಕರಿಗೆ ಒಂದು ಕಿ.ಮೀ. ದೂರದಿಂದಲೇ ನಿರ್ಬಂಧ ವಿಧಿಸಲಾಗಿದೆ. ಅವರ ಖಾಸಗಿ ಭೇಟಿಯನ್ನು ಭದ್ರತಾ ದೃಷ್ಟಿಯಿಂದ ತಿಳಿಸದಿದ್ದರಿಂದ ದೇವಾಲಯಕ್ಕೆ ಬರುವ ಭಕ್ತರು ನಿರಾಶೆಯಿಂದ ಹಿಂತಿರುಗಬೇಕಾಯಿತು.