ಚಾಮರಾಜನಗರ: ಕಾರ್ಯಾಂಗ, ಸರ್ಕಾರ ಸತ್ತಿರುವುದರಿಂದ ರಾಜ್ಯದ ಜನರಿಗೆ ನಿಜವಾಗಿಯೂ ನ್ಯಾಯ ಸಿಗುತ್ತಿರುವುದು ನ್ಯಾಯಾಂಗದಿಂದ ಮಾತ್ರ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಹೇಳಿದರು.
ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಆಕ್ಸಿಜನ್, ಜಿಎಸ್ಟಿ, ಕೊರೊನಾ ಲಸಿಕೆ ವಿಚಾರದಲ್ಲಿ ಕೇಂದ್ರ ಯಾವಗಾಲೂ ಮಲತಾಯಿ ಧೋರಣೆ ತಾಳುತ್ತಿದೆ. ರಾಜ್ಯ ಸರ್ಕಾರ ನಿರ್ಲಕ್ಷ್ಯ ತಾಳಿದ್ದು ಸಂಪೂರ್ಣ ವಿಫಲವಾಗಿದೆ. ರಾಜ್ಯದ 25 ಮಂದಿ ಸಂಸದರು ಧ್ವನಿ ಇಲ್ಲದವರಾಗಿದ್ದಾರೆ. ಹಾಗಾಗಿ, ಹೈಕೋರ್ಟ್, ಸುಪ್ರೀಂ ಕೋರ್ಟ್ನಿಂದ ನ್ಯಾಯ ಸಿಗುತ್ತಿದೆ ಎಂದರು.
ಚಾಮರಾಜನಗರ ದುರಂತಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನೇಮಿಸಿರುವ ಐಎಎಸ್ ಅಧಿಕಾರಿ ಮತ್ತು ನಿವೃತ್ತ ನ್ಯಾಯಮೂರ್ತಿಗಳ ತನಿಖಾ ತಂಡವನ್ನು ರದ್ದುಗೊಳಿಸಿ ಹೈಕೋರ್ಟ್ ನೇಮಿಸಿರುವ ತಂಡಕ್ಕೆ ಸಂಪೂರ್ಣ ಸಹಕಾರ ಕೊಡಬೇಕೆಂದು ಅವರು ಸರ್ಕಾರಕ್ಕೆ ಒತ್ತಾಯಿಸಿದರು.
ಪ್ರಿಂಟಿಂಗ್ ಮಷಿನ್ ಅವರ ಮನೆಯಲ್ಲೇ ಇದೆ:
ಪ್ಯಾಕೇಜ್ ಘೋಷಿಸಲು ನೋಟ್ ಪ್ರಿಂಟ್ ಮಾಡುವ ಮಷಿನ್ ಇಲ್ಲ ಎಂಬ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ನಿಜವಾಗಿಯೂ ನೋಟ್ ಪ್ರಿಂಟ್ ಮಾಡುವ ಮಷಿನ್ ಅವರ ಮನೆಯಲ್ಲೇ ಇದೆ. ಈ ಹಿಂದೆ ನೋಟ್ ಎಣಿಸುವ ಮಷಿನ್ ಅವರ ಮನೆಯಲ್ಲಿ ಸಿಕ್ಕಿತ್ತು. ಯಾವಾಗಲೂ ಅವರು ಬೇಜವಾಬ್ದಾರಿ, ಉದ್ಧಟತನದ ಹೇಳಿಕೆಗಳನ್ನೇ ಕೊಡುತ್ತಾರೆ. ಅಕ್ಕಿ ಕೊಡಿ ಎಂದರೆ ಸತ್ರೆ ಸಾಯಲಿ ಎಂದು ಕತ್ತಿ ಹೇಳುತ್ತಾರೆ ಎಂದು ಕಿಡಿಕಾರಿದರು.
ಮೈಸೂರು ಡಿಸಿ ನಿವಾಸದಲ್ಲಿ ಈಜುಕೊಳ ನಿರ್ಮಿಸಿರುವ ಕುರಿತು ಮಾತನಾಡಿ, ಮೈಸೂರಿನಲ್ಲಿ ಸಾರ್ವಜನಿಕ ಈಜುಕೊಳಗಳಿದ್ದು ಅಲ್ಲಿ ಅವರು ಬೇಕಾದರೆ ಈಜು ಹೊಡೆಯಬಹುದಾಗಿತ್ತು. ಈ ಸಂಕಷ್ಟದ ಸಮಯದಲ್ಲಿ ಈಜುಕೊಳ ನಿರ್ಮಿಸಿಕೊಂಡಿರುವುದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದರು.