ಚಾಮರಾಜನಗರ: ಕೆಲಸ ಬದಲಾಯಿಸಿದರು ಎನ್ನುವ ಕಾರಣಕ್ಕೆ ಮೇಲಧಿಕಾರಿಗೆ ಮಚ್ಚಿನಿಂದ ಹೊಡೆದು ಹಲ್ಲೆ ಮಾಡಿರುವ ಘಟನೆ ಚಾಮರಾಜನಗರ ತಾಲೂಕಿನ ಬದನಗುಪ್ಪೆಯಲ್ಲಿ ನಡೆದಿದೆ.
ಚೆಸ್ಕಾಂನ ಬದನಗುಪ್ಪೆ ವಿಭಾಗದ ಜೆಇ ಚಂದ್ರನಾಯಕ್ ಹಲ್ಲೆಗೊಳಗಾದವರು. ಚಾಮರಾಜನಗರದ ರಾಮಸಮುದ್ರ ನಿವಾಸಿ ಬೆಂಕಿ ಮಹದೇವಸ್ವಾಮಿ ಎಂಬಾತ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಹಿಂದೆ ಮಾಡುತ್ತಿದ್ದ ಕೆಲಸವನ್ನು ಬದಲಾಯಿಸಿದರು ಎಂದು ಕುಪಿತನಾದ ಮಹಾದೇವಸ್ವಾಮಿ, ಏಕಾಏಕಿ ಚಂದ್ರನಾಯಕ್ ಮೇಲೆ ಮಚ್ಚಿನಿಂದ ಮುಖ, ಕೈ ಭಾಗಕ್ಕೆ ಹೊಡೆದಿದ್ದಾನೆ ಎನ್ನಲಾಗಿದೆ.
ಇನ್ನು ತೀವ್ರ ರಕ್ತಸ್ರಾವದಿಂದ ಜ್ಞಾನ ತಪ್ಪಿದ ಚಂದ್ರನಾಯಕ ಅವರನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ಮಹಾದೇವಸ್ವಾಮಿಯನ್ನು ವಶಕ್ಕೆ ಪಡೆದಿದ್ದಾರೆ.