ಕೊಳ್ಳೇಗಾಲ: ತಾಲೂಕಿನ ಸತ್ತೇಗಾಲ ಗ್ರಾಮದಿಂದ ಉಗನೀಯ- ಪಾಳ್ಯ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ದುರಸ್ತಿ ಪಡಿಸಬೇಕೆಂದು ಆಗ್ರಹಿಸಿ ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ 209- ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.
ಸ್ಥಳೀಯ ಕಾಂಗ್ರೆಸ್ ಶಾಸಕ ತಮ್ಮ ಕ್ಷೇತ್ರದ ಅಭಿವೃದ್ಧಿಯಲ್ಲಿ ಬೇಜವಾಬ್ದಾರಿ ತನ ತೋರುತ್ತಿದ್ದಾರೆ ಎಂದು ಜೆಡಿಎಸ್ ಕಾರ್ಯಕರ್ತರು ಆರೋಪಿಸಿದ್ದರು. ಸತ್ತೇಗಾಲ ಗ್ರಾಮ ಪಂಚಾಯಿತಿ ಕಾರ್ಯಾಲಯದಿಂದ ಉಗನೀಯ- ಪಾಳ್ಯ ಸಂಪರ್ಕಿಸುವ ರಸ್ತೆಯವರೆಗೂ ಪ್ರತಿಭಟನಾ ಮೆರವಣಿಗೆಯ ಸಾಗಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಜಿಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ್ ಸತ್ತೇಗಾಲದಿಂದ ಉಗನೀಯ- ಪಾಳ್ಯ ಗ್ರಾಮಗಳಿಗೆ ಸಂಪರ್ಕ ಹೊಂದುವ ನಾಲ್ಕೂವರೆ ಕಿ. ಮೀ ರಸ್ತೆಯು ಹಳ್ಳ-ಕೊಳ್ಳದಿಂದ ಕೂಡಿದ್ದು, ಈ ಭಾಗದ ರೈತರಿಗೆ, ಶಾಲಾ ಮಕ್ಕಳಿಗೆ ಹಾಗೂ ಸಂಚಾರಿಗಳಿಗೆ ಬಹಳ ತೊಂದರೆಯಾಗಿದೆ. ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮಲೆಮಹದೇಶ್ವರ ಬೆಟ್ಟ, ಚಿಕ್ಕಲ್ಲೂರಿಗೂ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಅನೇಕ ವರ್ಷಗಳಿಂದ ದುರಸ್ತಿಯಾಗದೇ ಉಳಿದಿದೆ.
ಈ ಬಗ್ಗೆ ಕ್ಷೇತ್ರದ ಶಾಸಕರು ತಲೆಕಡೆಸಿಕೊಂಡಿಲ್ಲ. ರಸ್ತೆ ಅಭಿವೃದ್ಧಿ ಕಡೆಗೆ ಗಮನ ಹರಿಸದೇ ಅಧಿಕಾರದಲ್ಲಿದ್ದಾರೆ. ಈ ಹಿಂದೆ ಕಾಂಗ್ರೆಸ್ 5 ವರ್ಷ ಆಡಳಿತ ನಡೆಸಿದರೂ ಇಲ್ಲಿನ ಕಾಂಗ್ರೆಸ್ ಶಾಸಕ ಕ್ಷೇತ್ರದ ರಸ್ತೆ ಅಭಿವೃದ್ಧಿ ಕಡೆ ಗಮನ ಹರಿಸಲಿಲ್ಲ. 3 ಬಾರಿ ಶಾಸಕರಾದರೂ ಪ್ರಯೋಜನವಾಗಿಲ್ಲ. ಜನರೇ ಶಾಸಕರಿಗೆ ಮುಂದೆ ಬುದ್ದಿ ಕಲಿಸುತ್ತಾರೆ ಎಂದು ಕಿಡಿಕಾರಿದರು.
ಈಗಲಾದರೂ ಪ್ರತಿಭಟನೆಗೆ ಎಚ್ಚೆತ್ತು ರಾಜ್ಯ ಸರ್ಕಾರ ಕೂಡಲೇ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಬೇಕು. ಶಾಸಕರು ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕು. ಇಲ್ಲವಾದರೇ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.