ಚಾಮರಾಜನಗರ: ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ಎನ್ಆರ್ಸಿಗೆ ಬಿಎಸ್ಪಿ ಉಚ್ಛಾಟಿತ ಶಾಸಕ ಎನ್. ಮಹೇಶ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಕೊಳ್ಳೇಗಾಲದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಇಲ್ಲಿನ ನಾಗರಿಕನಾಗಿ 13 ಚುನಾವಣೆಗಳಲ್ಲಿ ಮತದಾನ ಮಾಡಿದ್ದೇನೆ. ನಾನು ಭಾರತೀಯನೆಂದು ಮತ್ತೊಮ್ಮೆ ಸಾಬೀತುಪಡಿಸಲು ದಾಖಲಾತಿ ಮಾಡಿಸುವುದಿಲ್ಲ. ಇದನ್ನೇ 136 ಕೋಟಿ ಭಾರತೀಯರು ಕೂಡ ಪಾಲಿಸಬೇಕೆಂದು ಕರೆ ನೀಡಿದರು.
ಇನ್ನು, ಸಿಎಎ ಕುರಿತು ಅವರು ಅಸಮಾನಧಾನ ವ್ಯಕ್ತಪಡಿಸಿ, ಅಫ್ಘಾನಿಸ್ತಾನ, ಬಾಂಗ್ಲಾದೇಶದ ಮುಸ್ಲಿಂ ನಾಗರಿಕರು ಒಂದು ವೇಳೆ ಅಸುರಕ್ಷತೆಯ ಭಾವದಿಂದ ದೇಶಕ್ಕೆ ಬಂದರೆ ಅವರಿಗೂ ಕೂಡ ಭಾರತದ ಪೌರತ್ವ ನೀಡಬೇಕು ಎಂದು ಒತ್ತಾಯಿಸಿದರು.
ಏಸು ಪ್ರತಿಮೆ ನಿರ್ಮಾಣಕ್ಕೆ ಬೆಂಬಲ:
ಕನಕಪುರ ತಾಲೂಕಿನಲ್ಲಿ ಅತಿ ದೊಡ್ಡ ಏಸು ಪ್ರತಿಮೆ ನಿರ್ಮಿಸಲು ಉದ್ದೇಶಿಸಿರುವುದು ಸ್ವಾಗತಾರ್ಹ. ಪ್ರವಾಸೋದ್ಯಮಕ್ಕೂ ಈ ಮೂಲಕ ಉತ್ತೇಜನ ಸಿಗಲಿದೆ. ಪ್ರಪಂಚದ ಶಾಂತಿಧೂತ ಭಾರತದ ಕಾಶ್ಮೀರದಲ್ಲೂ ಸಂಚರಿಸಿದ್ದು, ಅವರ ಪ್ರತಿಮೆ ಸ್ಥಾಪಿಸುವುದರ ಮೂಲಕ ನಾವು ಜಾತ್ಯಾತೀತರೆಂಬುದನ್ನು ಜಗತ್ತಿಗೆ ಸಾರಬೇಕಿದೆ ಎಂದು ಶಾಸಕ ಎನ್ ಮಹೇಶ್ ಹೇಳಿದ್ರು.