ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಫಾರಿ ಝೋನ್ನಲ್ಲಿ ಗಾಯಗೊಂಡಿದ್ದ ಗಂಡು ಹುಲಿಯನ್ನು ಇಂದು ಸೆರೆ ಹಿಡಿದು ಚಿಕಿತ್ಸೆಗಾಗಿ ಮೈಸೂರು ಮೃಗಾಲಯಕ್ಕೆ ರವಾನಿಸಲಾಗಿದೆ.
ಬಂಡೀಪುರ ವಲಯದ ಪ್ರವಾಸೋದ್ಯಮ ಪ್ರದೇಶದ ಗಂಜಿಕಟ್ಟೆ ಅರಣ್ಯ ಪ್ರದೇಶದ ಬಳಿ ಬುಧವಾರ ಸುಮಾರು 7 ರಿಂದ 8 ವರ್ಷದ ಗಂಡು ಹುಲಿಯೊಂದು ಗಾಯಗೊಂಡಿರುವುದು ಗಸ್ತಿನ ವೇಳೆ ಕಂಡು ಬಂದಿತ್ತು. ಕ್ಯಾಮರಾ ಟ್ರಾಪ್ ಅಳವಡಿಸಿ ನಿಗಾ ಇಡಲಾಗಿ, ಹುಲಿ ಚೇತರಿಕೆ ಕಾಣುವ ಲಕ್ಷಣ ಕಂಡು ಬಂದಿಲ್ಲ. ಈ ಹಿನ್ನೆಲೆ ಇಂದು ಅರವಳಿಕೆ ಚುಚ್ಚುಮದ್ದು ನೀಡಿ ಪಶು ವೈದ್ಯರು ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಿದ್ದಾರೆ.
ಹುಲಿಯ ಮೈ ಮೇಲಿನ ಗಾಯ ಗಮನಿಸಿದ ವೇಳೆ, ಕಾಡಾನೆಯ ಜತೆ ಕಾದಾಟದಲ್ಲಿ ಆನೆಯ ಕೊಂಬಿನಿಂದ ಚುಚ್ಚಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸದ್ಯ, ಹುಲಿ ಚಿಕಿತ್ಸೆಗೆ ಸ್ಪಂದಿಸುತ್ತಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಬಂಡೀಪುರ: ಕಾದಾಟದಲ್ಲಿ ಗಾಯಗೊಂಡು ನಿತ್ರಾಣ ಸ್ಥಿತಿಯಲ್ಲಿ ಹುಲಿ ಪತ್ತೆ