ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಯಳಂದೂರಿನ ಇಂದಿರಾ ಕ್ಯಾಂಟೀನ್ಗಳು ಕಳೆದ 4 ದಿನಗಳಿಂದ ಬಾಗಿಲು ಮುಚ್ಚಿದ್ದು ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ದುಬಾರಿ ಹಣ ಕೊಟ್ಟು ಹೋಟೆಲ್ ಗೆ ಮುಖ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೊಳ್ಳೇಗಾಲದಲ್ಲಿ ನಿತ್ಯ 1,500 ಮಂದಿ, ಗುಂಡ್ಲುಪೇಟೆಯಲ್ಲಿ 900 ಹಾಗೂ ಯಳಂದೂರಿನಲ್ಲಿ 400 ಮಂದಿ ಇದರ ಪ್ರಯೋಜನ ಪಡೆಯುತ್ತಿದ್ದರು. ಆದರೆ, ಕಳೆದ 4 ದಿನಗಳಿಂದ ಬಾಗಿಲು ಮುಚ್ಚಿರುವುದರಿಂದ ಹಿಡಿಶಾಪ ಹಾಕಿಕೊಂಡು ವಾಪಸ್ ಆಗುತ್ತಿದ್ದಾರೆ.
ಇಂದಿರಾ ಕ್ಯಾಂಟೀನ್ ಜವಾಬ್ದಾರಿ ವಹಿಸಿಕೊಂಡಿದ್ದ ಚೆಪ್ ಟಾಕ್ ಎಂಬ ಏಜೆನ್ಸಿಗೆ ಸರ್ಕಾರ ಹಣ ಬಿಡುಗಡೆ ಮಾಡದ ಕಾರಣ ಬಾಗಿಲು ಮುಚ್ಚಲಾಗಿದೆ ಎಂದು ತಿಳಿದು ಬಂದಿದೆ. 5 ರೂ.ಗೆ ತಿಂಡಿ, 10 ರೂ.ಗೆ ಊಟ ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ ಎಂಬ ಕಾರಣದಿಂದ ವಿವಿಧ ಗ್ರಾಮದ ಕೂಲಿ ಕಾರ್ಮಿಕರು ನಿತ್ಯ ಬೆಳಗ್ಗೆ ಮತ್ತು ಮಧ್ಯಾಹ್ನದ ವೇಳೆ ಇಂದಿರಾ ಕ್ಯಾಂಟೀನ್‍ಗೆ ಆಹಾರ ಸೇವಿಸುತ್ತಿದ್ದರು. ಆದರೆ, ಕಳೆದ 4 ದಿನದಿಂದ ಬಾಗಿಲು ಮುಚ್ಚಿರುವ ಹಿನ್ನೆಲೆ ಜನರು ಕ್ಯಾಂಟೀನ್ ಬಳಿ ಬಂದು ಬಾಗಿಲು ಹಾಕಿರುವುದನ್ನು ಕಂಡು ವಾಪಸ್ ಆಗುತ್ತಿದ್ದಾರೆ.
ಹಳ್ಳ ಹಿಡಿಯಿತೇ ಕಾಂಗ್ರೆಸ್ ಮಹಾತ್ವಕಾಂಕ್ಷೆ ಯೋಜನೆ: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಬಡ ಜನರು, ನಿರ್ಗತಿಕರು ಮತ್ತು ಕೂಲಿ ಕಾರ್ಮಿಕರಿಗೆ ಉಪಯೋಗವಾಗಲಿ, ಕಡಿಮೆ ಬೆಲೆಯಲ್ಲಿ ಜನರ ಹೊಟ್ಟೆ ತುಂಬಬೇಕು ಎಂಬ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿತ್ತು.
ಆದರೆ, ಇದೀಗ ಸರ್ಕಾರ ಸಿಬ್ಬಂದಿಗೆ ಹಣ ಬಿಡುಗಡೆ ಮಾಡದ ಕಾರಣ ಬಾಗಿಲು ಮುಚ್ಚಲಾಗಿದೆ. ಇದರಿಂದ ಕಾಂಗ್ರೆಸ್ ಮಹಾತ್ವಕಾಂಕ್ಷೆ ಯೋಜನೆ ಬಿಜೆಪಿ ಅವಧಿಯಲ್ಲಿ ಹಳ್ಳ ಹಿಡಿಯಿತೇ ಎಂಬ ಅನುಮಾನ ಕಾಡತೊಡಗಿದೆ.
2022ರ ಜನವರಿಯಿಂದ ಇಲ್ಲಿಯ ತನಕ 11 ತಿಂಗಳು ಕಳೆಯುತ್ತಿದ್ದರೂ ಸರ್ಕಾರ ಇಂದಿರಾ ಕ್ಯಾಂಟೀನ್‍ಗೆ ಹಣ ಬಿಡುಗಡೆ ಮಾಡಿಲ್ಲವಂತೆ. ಈ ಮಧ್ಯೆ ‘ಚೆಫ್ ಟಾಕ್’ ಎಂಬ ಏಜೆನ್ಸಿಯವರು ಹೇಗೋ ಸರಿದೂಗಿಸಿಕೊಂಡು ಸಿಬ್ಬಂದಿಗೆ 6 ತಿಂಗಳ ಹಣ ನೀಡಿ ಕ್ಯಾಂಟೀನ್ ನಡೆಸಿದ್ದಾರೆ. ಆದರೆ, ಇನ್ನೂ 5 ತಿಂಗಳ ಸಂಬಳ ಸಿಬ್ಬಂದಿಗೆ ಬಾಕಿ ಇರುವ ಕಾರಣ ಸಿಬ್ಬಂದಿ ಕೆಲಸಕ್ಕೆ ಬಂದಿಲ್ಲ. ಈ ಕಾರಣದಿಂದ ಬಾಗಿಲು ಮುಚ್ಚಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಚಾಮರಾಜನಗರ ಟ್ಯಾಂಕ್ ಸ್ವಚ್ಛಗೊಳಿಸಿದ ಪ್ರಕರಣ: ಒಬ್ಬನ ಬಂಧನ