ಚಾಮರಾಜನಗರ : ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದರೂ ಅಧಿಕಾರಿಗಳು ಜಾಣ ಕುರುತನ ತೋರ್ಪಡಿಸುತ್ತಾರೆ ಎಂಬ ಆರೋಪ ಕೇಳಿ ಬಂದಿದೆ.
ಚಾಮರಾಜನಗರ ತಾಲೂಕಿನ ಚಂದಕವಾಡಿ ಹೋಬಳಿಯ ಹೆಬ್ಬಸೂರಿನ ಸರ್ವೇ ನಂ. 272ರಲ್ಲಿ ಅಕ್ರಮವಾಗಿ ಬಿಳಿಕಲ್ಲು ಗಣಿಗಾರಿಕೆ ನಡೆಸಲಾಗ್ತಿದೆ. ರಾತ್ರಿ ವೇಳೆ ಸ್ಫೋಟಕಗಳನ್ನು ಸಿಡಿಸುತ್ತಿದ್ದಾರೆಂದು ಹೆಬ್ಬಸೂರು, ದಡದಹಳ್ಳಿ, ಅರಳೀಪುರ ಗ್ರಾಮಸ್ಥರು ಆರೋಪಿಸಿದ್ದಾರೆ. ಸದರಿ ಸರ್ಕಾರಿ ಜಮೀನಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಘಟಕವೂ ಇದ್ದು ಅದರ ಸಮೀಪವೇ ಸ್ಫೋಟಿಸಲಾಗುತ್ತಿದೆ ಎನ್ನಲಾಗಿದೆ.
ಅಷ್ಟೇ ಅಲ್ಲ, ರಾತ್ರಿ ವೇಳೆ ಜಮೀನುಗಳಿಗೆ ನೀರು ಹಾಯಿಸಲು ಸ್ಫೋಟಕದ ಭಯದಿಂದ ರೈತರು ತೆರಳದಂತಾಗಿದೆ. ಇದರಿಂದ ಬೆಳೆಗೂ ಕುತ್ತು ಬಂದಿದೆ. ವನ್ಯಜೀವಿಗಳಿಗೂ ಇಲ್ಲಿನ ಗಣಿಗಾರಿಕೆಯಿಂದ ಅಪಾಯ ಉಂಟಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಸರ್ವೇ ನಂ. 272ರಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ಪಡೆದಿದ್ದ 11 ಮಂದಿ ಗುತ್ತಿಗೆದಾರರ ಪರವಾನಗಿ 2007ರಲ್ಲೇ ಮುಗಿದರೂ ಇನ್ನೂ ಅವ್ಯಾಹತವಾಗಿ ಲೂಟಿ ಮಾಡುತ್ತಿದ್ದಾರೆ. ಗಣಿಗಾರಿಕೆ ವೇಳೆ ಇಬ್ಬರು ಸತ್ತಿದ್ದಾರೆ. ಓರ್ವ ಕಣ್ಣು ಕಳೆದುಕೊಂಡಿದ್ದಾನೆಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಈ ಹಿಂದೆ ಸಾಕಷ್ಟು ದೂರುಗಳನ್ನು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. 4 ತಿಂಗಳಿನಿಂದ ಸ್ಥಗಿತಗೊಳಿಸಿದ್ರು. ಈಗ 15 ದಿನಗಳಿಂದ ಪುನಾ ಗಣಿಗಾರಿಕೆ ಆರಂಭಿಸಿದ್ದಾರೆ. ಹೀಗಾಗಿ ಸಂಬಂಧ ಪಟ್ಟವರ ವಿರುದ್ಧ ಜಿಲ್ಲಾಧಿಕಾರಿಗಳು ಶೀಘ್ರವೇ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಜನ ಮನವಿ ಮಾಡಿದ್ದಾರೆ.