ಚಾಮರಾಜನಗರ: ಗಣಿ ಮತ್ತು ಭೂವಿಜ್ಞಾನ ಇಲಾಖೆ ಜಿಲ್ಲೆಯಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ವಿಧಿಸಿದ್ದ 142 ಕೋಟಿ ರೂ.ದಂಡವನ್ನು ರದ್ದುಗೊಳಿಸಿ ಹೈಕೊರ್ಟ್ ಆದೇಶಿಸಿದೆ.
ಸರ್ವೇ ನಡೆಸಿ ಅಕ್ರಮ ಗಣಿಗಾರಿಕೆ ನಡೆದಿದೆ ಎಂದು ಖಚಿತಪಡಿಸಿ ಸರಿಸುಮಾರು 142 ಕೋಟಿ ರೂ.ನಷ್ಟು ದಂಡ ವಿಧಿಸಿತ್ತು. ಇದರ ವಿರುದ್ಧ ಶ್ರೀನಿವಾಸಶೆಟ್ಟಿ ಎಂಬುವರು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.
ಗಣಿ ಮಾಲೀಕರ ಸಮಕ್ಷಮದಲ್ಲಿ ಸರ್ವೇ ಕಾರ್ಯ ನಡೆದಿಲ್ಲ ಮತ್ತು ಅವೈಜ್ಞಾನಿಕ ಕ್ರಮ ಅನುಸರಿಸಲಾಗಿದೆ ಎಂಬ ಅರ್ಜಿದಾರರ ವಾದವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಅಲ್ಲದೇ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡ್ರೋಣ್ ಸರ್ವೇ ನಡೆಸಲು ಸೂಚಿಸಿದೆ.
ಓದಿ: ಸರ್ಕಾರಕ್ಕೆ ಆದಾಯ ಬರಬೇಕಾದರೆ ಸೆಸ್ ಅನಿವಾರ್ಯ: ಡಿಸಿಎಂ ಅಶ್ವತ್ಥ್ ನಾರಾಯಣ್
ಹೈಕೋರ್ಟ್ ತೀರ್ಮಾನದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಗಣಿಗಾರಿಕೆ ಸರ್ವೇ ನಡೆಸಲು ಸರ್ಕಾರ 8 ಕೋಟಿ ರೂ. ಮಂಜೂರು ಮಾಡಿದ್ದು, ಫೆ.12ಕ್ಕೆ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. ಏಪ್ರಿಲ್-1ರಂದು ಡ್ರೋಣ್ ಸರ್ವೇ ಕಾರ್ಯ ನಡೆಯಲಿದೆ.
ಗಣಿ ಮಾಲೀಕರಿಗೆ ನೋಟಿಸ್ ಕೊಟ್ಟು, ಸರ್ವೇ ನಡೆಸಿ, ಗಡಿ ಸ್ತಂಭಗಳಿಲ್ಲದಿದ್ದರೇ ಸ್ಥಾಪಿಸಿ, ಬಳಿಕ ಅಕ್ರಮ ನಡೆದಿದ್ದಲ್ಲಿ ದಂಡ ವಿಧಿಸಲಾಗುತ್ತದೆ ಎಂದು ತಿಳಿದು ಬಂದಿದೆ.