ಚಾಮರಾಜನಗರ : ವರ್ಗಾವಣೆಯಾದ ಬಳಿಕ ಡಿಜಿಟಲ್ ಕೀ ಉಪಯೋಗಿಸಿ ಏಕ ನಿವೇಶನವನ್ನು ನಗರ ಪ್ರಾಧಿಕಾರದ ಅನುಮತಿ ಪಡೆಯದೇ ಬಹು ನಿವೇಶಗಳನ್ನಾಗಿ ವಿಂಗಡಿಸಿ ಇ-ಸ್ವತ್ತು ನೀಡಿ ಅಕ್ರಮ ಎಸಗಿದ ಆರೋಪದ ಹಿನ್ನೆಲೆ ಕೊಳ್ಳೆಗಾಲ ನಗರಸಭೆ ಪೌರಾಯುಕ್ತ ನಾಗಶೆಟ್ಟಿ ಅವರನ್ನು ಅಮಾನತು ಮಾಡಲಾಗಿದೆ.
ಈ ಕುರಿತು ಡಿಸಿ ಡಾ.ಎಂ ಆರ್ ರವಿ ಪತ್ರಿಕಾ ಪ್ರಕಟಣೆ ನೀಡಿದ್ದು, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಆದೇಶ ಹೊರಡಿಸಿರುವ ಹಿನ್ನೆಲೆ ನಾಗಶೆಟ್ಟಿ ಅವರನ್ನು ತಕ್ಷಣದಿಂದ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ.
ಕೊಳ್ಳೇಗಾಲ ನಗರ ಸಭೆಯ ವಾರ್ಡ್ 18ರ ಬಡಾವಣೆಗೆ ಸೇರಿದ ಖಾತೆ ಸಂಖ್ಯೆ 3815ರ ಏಕ ನಿವೇಶನವನ್ನು ನಗರ ಯೋಜನಾ ಪ್ರಾಧಿಕಾರದ ಅನುಮತಿ ಪಡೆಯದೇ ಡಿಜಿಟಲ್ ಕೀ ಉಪಯೋಗಿಸಿ ಬಹು ನಿವೇಶನಗಳನ್ನಾಗಿ ವಿಂಗಡಿಸಿ ಇ-ಸ್ವತ್ತುಗಳನ್ನು ನೀಡಿ ಅಕ್ರಮ ಎಸಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ತೆರವಾಗಿರುವ ಕೊಳ್ಳೇಗಾಲ ನಗರಸಭೆ ಪೌರಾಯುಕ್ತರ ಹುದ್ದೆಗೆ ಕೊಳ್ಳೇಗಾಲ ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಅಲ್ತಾಪ್ ಅಹ್ಮದ್ ಅವರನ್ನು ಪ್ರಭಾರದಲ್ಲಿರಿಸಿ ಆದೇಶಿಸಲಾಗಿದೆ.