ಚಾಮರಾಜನಗರ: ಮಂಡ್ಯ ಜಿಲ್ಲೆ ಮಳವಳ್ಳಿಯಿಂದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿರುವ ಶಾಸಕ ಅನ್ನದಾನಿ ಇಂದು ಹನೂರು ಪಟ್ಟಣಕ್ಕೆ ಆಗಮಿಸಿದರು. ತಾಳಬೆಟ್ಟದಲ್ಲಿ ಅವರು ವಾಸ್ತವ್ಯ ಹೂಡಲಿದ್ದಾರೆ. ಮಾರ್ಗಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೊರೊನಾ ವೈರಸ್ ಉಲ್ಬಣಗೊಂಡ ವೇಳೆ ತಾಲೂಕಿನಲ್ಲಿ ಹೆಚ್ಚು ಸಾವು-ನೋವು ಆಗಬಾರದೆಂದು ಹರಕೆ ಕಟ್ಟಿಕೊಂಡು ಮಹದೇಶ್ವರನ ಮೊರೆ ಹೋಗಿದ್ದೆ. ಈಗ ಆ ಹರಕೆ ತೀರಿಸಲು ಯಾತ್ರೆ ಕೈಗೊಂಡಿದ್ದೇನೆ" ಎಂದರು.
ಇದೇ ವೇಳೆ, "ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರೆ ಮತ್ತೊಮ್ಮೆ ಕಾಲ್ನಡಿಗೆಯಲ್ಲೇ ಬರುವುದಾಗಿ ಹರಕೆ ಕಟ್ಟಿಕೊಳ್ಳುತ್ತೇನೆ" ಎಂದು ತಿಳಿಸಿದರು. "ಮಳವಳ್ಳಿ ಹಾಗೂ ಹನೂರಿಗೆ ಒಂದು ಸೇತುವೆಯಷ್ಟೇ ಗಡಿಯಾಗಿದೆ. ಇಲ್ಲಿನ ಅಭ್ಯರ್ಥಿ ಮಂಜುನಾಥ್ ಗೆಲ್ಲಬೇಕು. ಕುಮಾರಸ್ವಾಮಿ ಅವರು ಬಡವರ ಪರವಾದಂತಹ ಯೋಜನೆಗಳನ್ನು ಜಾರಿಗೆ ತರಲು ಇಡೀ ರಾಜ್ಯಾದ್ಯಂತ ಪಂಚರತ್ನ ಯೋಜನೆಯಿಂದ ಪ್ರವಾಸ ಮಾಡುತ್ತಿದ್ದಾರೆ. ಆ ನಿಟ್ಟಿನಲ್ಲಿ ಬಡವರ ಪಾಲಿನ ಯೋಜನೆಗಳು ಜಾರಿಯಾಗಲಿ ಮತ್ತು 2023ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಕುಮಾರಸ್ವಾಮಿ ರಾಜ್ಯದ ಸಿಎಂ ಆಗಬೇಕೆಂದು ಹರಕೆ ಕಟ್ಟಿಕೊಂಡು 104 ಕಿಲೋ ಮೀಟರ್ ಮತ್ತೆ ಕಾಲ್ನಡಿಗೆಯಲ್ಲಿ ಬಂದು ಮಲೆ ಮಹದೇಶ್ವರನಿಗೆ ಪೂಜೆ ಸಲ್ಲಿಸುವುದಾಗಿ" ಅವರು ತಿಳಿಸಿದರು. ಶಾಸಕರು ಸೇರಿದಂತೆ ಯಾತ್ರಾರ್ಥಿಗಳಿಗೆ ಹನೂರಿನಲ್ಲಿ ಸ್ವಾಗತ ಕೋರಿ, ಬೀಳ್ಕೊಡಲಾಯಿತು.
ಇದನ್ನೂ ಓದಿ: ಬೆಂಗಳೂರು-ಮೈಸೂರು ಹೈವೇ ಕಾಮಗಾರಿಯಲ್ಲಿ ಭ್ರಷ್ಟಾಚಾರ: ಶಾಸಕ ಅನ್ನದಾನಿ
ಹೀಗೂ ವಂಚಿಸ್ತಾರೆ ಹುಷಾರ್!: ಮೊದಲೆಲ್ಲಾ ಮೆಸೇಜ್, ಕರೆ ಮಾಡಿ ಟೋಪಿ ಹಾಕುತ್ತಿದ್ದವರು ಈಗ ಮನೆ ಮನೆಗೆ ಪೋಸ್ಟ್ ಕಳುಹಿಸಿ ವಂಚನೆ ಮಾಡುತ್ತಿದ್ದಾರೆ. ಕಾರು ಬಹುಮಾನ ಬಂತೆಂದು ಹಣ ಕಳುಹಿಸಿ ವ್ಯಕ್ತಿಯೊಬ್ಬರು ಮೋಸ ಹೋಗಿರುವ ಘಟನೆ ಚಾಮರಾಜನಗರ ತಾಲೂಕಿನ ಇರಸವಾಡಿ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಗಾಳ: ಮನೆಗೆ ಆಹ್ವಾನಿಸಿದವನಿಗೆ ವಂಚಿಸಿದ್ದ ಇಬ್ಬರ ಬಂಧನ
27 ವರ್ಷದ ಯುವಕ ಮೋಸ ಹೋದಾತ. ಪೋಸ್ಟ್ ಮೂಲಕ ಈತನ ಮನೆಗೆ ಸ್ಕ್ರಾಚ್ ಕಾರ್ಡ್ ಬಂದಿದ್ದು ಅದರಲ್ಲಿ ಕಾರು ಬಹುಮಾನ ಬಂದಿರುವುದಾಗಿ ಬರೆಯಲಾಗಿತ್ತು. ಜೊತೆಗೆ ಸ್ಕ್ರಾಚ್ ಕಾರ್ಡ್ ಅನ್ನು ವಾಟ್ಸಾಪ್ ಮಾಡುವಂತೆ ಒಂದು ನಂಬರ್ ಕೊಡಲಾಗಿತ್ತು. ಇದನ್ನು ನಂಬಿದ ಯುವಕ ವಾಟ್ಸಾಪ್ ಮಾಡಿದ್ದು ಕಾರು ಪಡೆಯಲು 25 ಸಾವಿರ ರೂಪಾಯಿ ಕಳುಹಿಸುವಂತೆ ಸಂದೇಶ ಬಂದಿದೆ. ವಂಚಕ ಹೇಳಿದ ಮಾತನ್ನು ನಂಬಿ ಯುವಕ ದುಡ್ಡು ಕಳುಹಿಸಿದ್ದಾನೆ. ಮತ್ತೆ ಆತ ಹಣ ಕೇಳಿದಾಗ ಮೋಸ ಹೋಗಿರುವುದು ತಿಳಿದು ಬಂದಿದೆ. ಚಾಮರಾಜನಗರ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸಾಲ ಕೊಡುವುದಾಗಿ ಖೋಟಾ ನೋಟು ತೋರಿಸಿ ವಂಚಿಸುತ್ತಿದ್ದ ಮೂವರ ಬಂಧನ