ಚಾಮರಾಜನಗರ: ''ನಾನಂತೂ ಲೋಕಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿಯಲ್ಲ'' ಎಂದು ಸಚಿವ ವೆಂಕಟೇಶ್ ಹೇಳಿದರು. ಚಾಮರಾಜನಗರದಲ್ಲಿ ಇಂದು ಮಾಧ್ಯಮವರೊಂದಿಗೆ ಮಾತನಾಡಿದ ಅವರು, ''ಹಾಲಿ ಸಚಿವರು ಎಂಪಿ ಅಭ್ಯರ್ಥಿ ಎಂಬುದರಲ್ಲಿ ಯಾರ ಹೆಸರಿದೆಯೋ ನನಗೆ ಗೊತ್ತಿಲ್ಲ. ಆದರೆ, ನಾನಂತೂ ಆಕಾಂಕ್ಷಿಯಲ್ಲ, ನನಗೆ ವಯಸ್ಸಾಗಿದೆ. ರಾಜ್ಯ ರಾಜಕಾರಣ ಸಾಕು. ಇದೇ ನನ್ನ ಕೊನೆಯ ಚುನಾವಣೆ ಆಗಿದ್ದು, ಮತ್ತೆ ಚುನಾವಣೆಗೆ ನಾನು ಸ್ಪರ್ಧೆ ಮಾಡುವುದಿಲ್ಲ'' ಎಂದು ಸ್ಪಷ್ಟಪಡಿಸಿದರು.
''ಮೈಸೂರು ಕ್ಷೇತ್ರದಿಂದ ಯತೀಂದ್ರ ಸಿದ್ದರಾಮಯ್ಯ ಸ್ಪರ್ಧೆ ಮಾಡುವುದಿಲ್ಲ. ಬಿಜೆಪಿ ಅವರಿಗೆ ಮಾತನಾಡುವುದು ಚಟ. ಅವರ ಚಟಕ್ಕೆ ಏನೇನೋ ಹೇಳುತ್ತಿದ್ದಾರೆ. ಲೋಕಸಭಾ ಟಿಕೆಟ್ ಇನ್ನೂ ಫೈನಲ್ ಆಗಿಲ್ಲ. ಆಕಾಂಕ್ಷಿಗಳ ಹೆಸರು ಚರ್ಚೆಯಲ್ಲಿದೆ'' ಎಂದರು.
ಹೆಗಡೆ ವಿರುದ್ಧ ಕಿಡಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಮಾತನಾಡಿದ ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆಗೆ ಪ್ರತಿಕ್ರಿಯಿಸಿ, ''ಅವರಿಗೆ ಸಂಸ್ಕಾರ ಇಲ್ಲ. ಸಂಸ್ಕಾರ ಇಲ್ಲದ ವ್ಯಕ್ತಿಗೆ ನಾವೇನು ಹೇಳುವುದು. ಸಂಸ್ಕಾರ ಇಲ್ಲದವರು ಅದೇ ರೀತಿ ಮಾತನಾಡುವುದು. ಸಂಸ್ಕಾರ ಇದ್ದವರು ಅವರ ರೀತಿ ಮಾತನಾಡುವುದಿಲ್ಲ'' ಎಂದು ಏಕವಚನದಲ್ಲಿ ಕಿಡಿಕಾರಿದರು.
''ಸರ್ಕಾರ ಇದೆ, ಕಾನೂನು ಇದೆ. ಶಾಂತಿ-ಸುವ್ಯವಸ್ಥೆ ಮಾಡುವ ಜವಾಬ್ದಾರಿ ಸರ್ಕಾರ ಮಾಡಲಿದೆ. ಮಸೀದಿಯನ್ನು ಸುಲಭವಾಗಿ ಧ್ವಂಸ ಮಾಡಲು ಸರ್ಕಾರ ಬಿಡುವುದಿಲ್ಲ. ಹೆಗಡೆ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಅಧಿಕಾರಿಗಳು, ಮಂತ್ರಿಗಳು ಅವರ ಮೇಲೆ ಕ್ರಮ ಜರುಗಿಸುತ್ತಾರೆ ಎಂದ ಅವರು, ಎಂಪಿ ಚುನಾವಣೆ ಬಳಿಕ ಸಂಪುಟ ಪುನಾರಚನೆ ಬಗ್ಗೆ ಮಾತನಾಡಿ, ''ಕಾದು ನೋಡಬೇಕು, ಅದನ್ನು ಇವಾಗ ಭವಿಷ್ಯ ಹೇಳಲು ಆಗುವುದಿಲ್ಲ, ಅದರ ಬಗ್ಗೆ ಏನು ಚರ್ಚೆ ಆಗಿಲ್ಲ'' ಎಂದು ಉತ್ತರಿಸಿದರು.
ಆನೆಮಡುವಿನ ಕೆರೆಗೆ ಬಾಗಿನ: ಚಾಮರಾಜನಗರ ತಾಲೂಕಿನ ಆನೆಮಡುವಿನ ಕೆರೆಗೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹಾಗೂ ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಬಾಗಿನ ಅರ್ಪಿಸಿದರು. ಕೆರೆಗೆ ನೀರು ತುಂಬುವ ಸಂಬಂಧ ರೈತರು ತಿಂಗಳುಗಟ್ಟಲೇ ಪ್ರತಿಭಟನೆ ನಡೆಸಿದ್ದರು.
ಸಾಗುವಳಿದಾರರಿಗೆ ನ್ಯಾಯ ಕೊಡಿಸುವ ಭರವಸೆ: ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರ ಹಾಗೂ ಪುಣಜನೂರು ಸಮೀಪ ಸಾಗುವಳಿದಾರರ ಜಮೀನುಗಳನ್ನು ಅರಣ್ಯ ಇಲಾಖೆ ತಮ್ಮ ವಶಕ್ಕೆ ಪಡೆದು ಕಿರುಕುಳು ಕೊಡುತ್ತಿದೆ ಎಂದು ಸಾಗುವಳಿದಾರರು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು. ಧರಣಿ ಸ್ಥಳಕ್ಕೆ ಸಚಿವ ಕೆ.ವೆಂಕಟೇಶ್ ಭೇಟಿ ಕೊಟ್ಟು ಮಾತನಾಡಿ, ''ಕೂಡಲೇ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತಾರೆ, ಸಾಗುವಳಿದಾರರಿಗೆ ನ್ಯಾಯ ಕೊಡಿಸಲಾಗುವುದು'' ಎಂದರು. ಅರಣ್ಯ ಇಲಾಖೆಯವರು ಕಾಲಿಟ್ಟ ಜಾಗವನ್ನೆಲ್ಲಾ ತಮ್ಮದೇ ಎನ್ನುತ್ತಾರೆ. ರೈತರಿಗೆ ಭೂಮಿ ಮಂಜೂರಾದ ಮೇಲೆ ಅವರೇಕೆ ಈಗ ಅಡ್ಡಿಪಡಿಸುತ್ತಾರೆ. ಕೂಡಲೇ ಸೂಕ್ತ ಕ್ರಮ ಕೈಗೊಳ್ಳಿ'' ಎಂದು ಡಿಸಿಗೆ ಸೂಚಿಸಿದರು.
ಇದನ್ನೂ ಓದಿ: ಬೆಂಗಳೂರು: ಗ್ಯಾಸ್ ಸಿಲಿಂಡರ್ ಸ್ಫೋಟ, 7 ಜನರಿಗೆ ಗಾಯ