ಚಾಮರಾಜನಗರ : ಚಿಕಿತ್ಸೆಗೆಂದು ಬಂದಿದ್ದ ವಿವಾಹಿತೆಯನ್ನು ಬಾಬಾ ತಲೆಕೆಡಿಸಿ ತನ್ನತ್ತ ಸೆಳೆದುಕೊಂಡಿದ್ದಾನೆ ಎಂದು ತಿಳಿದ ಪತಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಂಡ್ಲುಪೇಟೆ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಮಹಮದ್ ಅಫ್ಘಾನ್ ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ.
ಮೈಸೂರಿನ ಬಾಬಾ ಖುರ್ರಾಂ ಪಾಷಾ ಎಂಬ ನಕಲಿ ಬಾಬಾನ ಬಳಿ ಚಿಕಿತ್ಸೆ ಪಡೆಯಲು ಈ ದಂಪತಿ ಆಗಾಗ್ಗೆ ಹೋಗುತ್ತಿದ್ದರಂತೆ. ಚಿಕಿತ್ಸೆ ನೆಪದಲ್ಲಿ ಅಫ್ಘಾನ್ ಪತ್ನಿಯನ್ನು ಪಾಷಾ ತನ್ನ ಬಲೆಗೆ ಬೀಳಿಸಿಕೊಂಡಿದ್ದಾನೆ. ಇದರ ಬೆನ್ನಲ್ಲೇ ಪತಿ ಪತ್ನಿಗೆ ಗಲಾಟೆಯಾದ ಪರಿಣಾಮ ಪತ್ನಿ ತನ್ನ ಮೈಸೂರಿನ ಪೋಷಕರ ಮನೆಯಲ್ಲಿ ಕಳೆದ ಒಂದು ತಿಂಗಳಿನಿಂದ ವಾಸವಿದ್ದಳು. ಈ ಎಲ್ಲಾ ಘಟನೆಯಿಂದ ತೀವ್ರವಾಗಿ ಮನನೊಂದ ಪತಿ ಇಂದು ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಡೆತ್‌ನೋಟ್ ಸಹ ಬರೆದಿಟ್ಟಿದ್ದಾರೆ.
ಇದನ್ನೂ ಓದಿ: ದಿವ್ಯಾ ಸೇರಿ 6 ಜನರಿಗೆ ವೈದ್ಯಕೀಯ ತಪಾಸಣೆ : ಕಸ್ಟಡಿಗೆ ನೀಡುವಂತೆ ಮನವಿ ಮಾಡಲಿದೆ ಸಿಐಡಿ
ತನ್ನ ಸಾವಿಗೆ ಮೈಸೂರಿನ ಬಾಬಾ ಖುರ್ರಾಂ ಪಾಷಾ ಮತ್ತು ಈತನ ಇಬ್ಬರು ಸಹಚರರೇ ಕಾರಣ. ನನ್ನ ಪತ್ನಿಯ ತಲೆ ಕೆಡಿಸಿ ಬಾಬಾಗೆ ತಲೆಹಿಡಿದಿದ್ದಾರೆ. ಇವರನ್ನ ಯಾವುದೇ ಕಾರಣಕ್ಕೂ ಬಿಡಬೇಡಿ ಎಂದು ಪತ್ರದಲ್ಲಿ ಬರೆದಿದ್ದಾರೆ. ಈ ಸಂಬಂಧ ಮೃತನ ಸಂಬಂಧಿಕರು ದೂರು ನೀಡಿದ್ದು, ಆತ್ಮಹತ್ಯೆಗೆ ಪ್ರಚೋದನೆ ಎಂದು ಗುಂಡ್ಲುಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.