ಚಾಮರಾಜನಗರ: ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕೆಂದು ಆಗ್ರಹಿಸಿ ಇಂದು ಚಾಮರಾಜನಗರದ ಎರಡು ಕಡೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ರೈತರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ಭುವನೇಶ್ವರಿ ವೃತ್ತದಲ್ಲಿ ರೈತ ಸಂಘದ ಕಾರ್ಯಕರ್ತರು ಮಾನವ ಸರಪಳಿ ರಚಿಸಿ ಹೆದ್ದಾರಿ ತಡೆ ನಡೆಸಿದರು. ಅಂಬಾನಿ, ಅದಾನಿ ಅವರಿಗೆ ಚಮಚಾಗಿರಿ ಮಾಡಲು ಮೋದಿ ಕೃಷಿ ಕಾಯ್ದೆ ಜಾರಿಗೆ ತಂದು ನಮ್ಮನ್ನು ಗುಲಾಮಗಿರಿಗೆ ತಳ್ಳುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಇದೇ ವೇಳೆ ರಸ್ತೆಯಲ್ಲೇ ಮಲಗಿ ಮೋದಿ ವಿರುದ್ಧ ಘೋಷಣೆ ಕೂಗಿದ ರೈತರು ಉರುಳು ಸೇವೆ ಮಾಡಿ ನಮ್ಮ ಹೋರಾಟ ನಿರಂತರ ಎಂದು ಕೇಂದ್ರ ಸರ್ಕಾರದ ವಿರುದ್ಧ ಎಚ್ಚರಿಸಿದರು.
ಓದಿ : ಬೆಂಗಳೂರಿನಲ್ಲೂ ಕೃಷಿ ಕಾಯ್ದೆ ವಿರುದ್ಧ ರೈತರ ಕಹಳೆ.. ಅನ್ನದಾತರನ್ನ ವಶಕ್ಕೆ ಪಡೆದ ಪೊಲೀಸರು!
ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ : ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭಾಗ್ಯರಾಜ್ ನೇತೃತ್ವದಲ್ಲಿ ಸಂತೇಮರಹಳ್ಳಿ ವೃತ್ತದ ಸಮೀಪ ಹೆದ್ದಾರಿ ತಡೆದ ರೈತರು, ದಲಿತಪರ ಸಂಘಟನೆ ಕಾರ್ಯಕರ್ತರು ಟೈರ್ ಗೆ ಬೆಂಕಿ ಹಚ್ಚಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಇನ್ನು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.