ಚಾಮರಾಜನಗರ: ಚಾಮರಾಜನಗರ ನಗರಸಭೆ ಆಯುಕ್ತ ಕರಿಬಸವಯ್ಯ ಅವರ ವರ್ಗಾವಣೆ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದ್ದು, ಇಬ್ಬರು ಆಯುಕ್ತರ ನಡುವೆ ನಡೆಯುತ್ತಿದ್ದ ಅಧಿಕಾರ ಗುದ್ದಾಟಕ್ಕೆ ಬ್ರೇಕ್ ಬಿದ್ದಿದೆ.
ಕಳೆದ ಮೂರುವರೆ ತಿಂಗಳುಗಳ ಹಿಂದೆಯಷ್ಟೇ ನಂಜನಗೂಡು ನಗರಸಭೆಯಿಂದ ಚಾಮರಾಜನಗರ ನಗರಸಭೆ ಆಯುಕ್ತರಾಗಿ ಕರಿಬಸವಯ್ಯ ಅಧಿಕಾರ ವಹಿಸಿಕೊಂಡಿದ್ದರು. ಅವರನ್ನು, ಜು.27ರಂದು ಹನೂರು ಪಟ್ಟಣ ಪಂಚಾಯತ್ ಸಮುದಾಯ ಅಧಿಕಾರಿಯನ್ನಾಗಿ ವರ್ಗಾಯಿಸಿ ಪರಶಿವಯ್ಯ ಎಂಬುವರನ್ನು ಚಾಮರಾಜನಗರ ನಗರಸಭೆ ಆಯುಕ್ತರನ್ನಾಗಿ ನೇಮಕ ಮಾಡಲಾಗಿತ್ತು.
ಕರಿಬಸವಯ್ಯ ಅವರು ತಮ್ಮ ವರ್ಗಾವಣೆ ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋಗಿದ್ದರು. ಜು. 28ರಂದು ಅವಧಿಪೂರ್ವ ವರ್ಗಾವಣೆಯನ್ನು ರದ್ದುಗೊಳಿಸಿ ಹೈಕೋರ್ಟ್ ಆದೇಶಿಸಿದ್ದರೂ, ಕಳೆದ ಒಂದು ವಾರಗಳಿಂದ ಪರಶಿವಯ್ಯ ಹಾಗೂ ಕರಿಬಸವಯ್ಯ ಇಬ್ಬರ ನಡುವೆ ಅಧಿಕಾರ ಗುದ್ದಾಟ ನಡೆದಿತ್ತು. ಇಬ್ಬರೂ ಪೌರಾಯುಕ್ತರು ಕೆಲಸ ನಿರ್ವಹಿಸುವ ಗೊಂದಲವೂ ಏರ್ಪಟ್ಟು, ಗುತ್ತಿಗೆದಾರರ ಬಿಲ್ಗಳು, ಟೆಂಡರ್ ಪ್ರಕ್ರಿಯೆ, ಟ್ರೇಡ್ ಲೈಸೆನ್ಸ್ ಎಲ್ಲಾ ಸಾರ್ವಜನಿಕ ಕೆಲಸಗಳು ಕುಂಠಿತಗೊಂಡಿದ್ದವು.
ಇಂದು ಹೈಕೋರ್ಟ್ ಆದೇಶದ ಪ್ರತಿ ಕೈ ಸೇರಿದ ಹಿನ್ನೆಲೆಯಲ್ಲಿ ಡಿಸಿ ಬಳಿ ಮತ್ತೆ ಚಾಮರಾಜನಗರ ಆಯುಕ್ತರಾಗಿ ಕರಿಬಸವಯ್ಯ ವರದಿ ಮಾಡಿಕೊಂಡಿದ್ದು ಎಲ್ಲಾ ಗೊಂದಲಕ್ಕೂ ತೆರೆಬಿದ್ದಿದೆ.