ಚಾಮರಾಜನಗರ: ಬೈಕ್ ಸವಾರರು ಅಪಘಾತದಲ್ಲಿ ಮೃತಪಡುತ್ತಿರುವುದು ಮತ್ತು ಗಂಭೀರವಾಗಿ ಗಾಯಗೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಚಾಮರಾಜನಗರ ಜಿಲ್ಲಾದ್ಯಂತ ಜು.1 ರಿಂದ ಬೈಕ್ ಸವಾರರು ಮತ್ತು ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ.
ಈ ಕುರಿತು ಕಳೆದ ಮೂರು ದಿನದಿಂದ ಜಿಲ್ಲಾ ಪೊಲೀಸ್ ಇಲಾಖೆ ಸಾಕಷ್ಟು ಪ್ರಚಾರ ನಡೆಸಿದ್ದು, ಹೆಲ್ಮೆಟ್ ಧರಿಸದಿದ್ದಲ್ಲಿ ದಂಡ ವಿಧಿಸಲಾಗುವುದು ಎಂಬ ಎಚ್ಚರಿಕೆಯನ್ನು ನೀಡಿದೆ.
ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್.ಡಿ. ಆನಂದ್ ಕುಮಾರ್ ಈಟಿವಿ ಭಾರತ್ನೊಂದಿಗೆ ಮಾತನಾಡಿ, ಹೆಲ್ಮೆಟ್ ಧಾರಣೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಸೂಚಿಸಲಾಗಿದೆ. ಜಿಲ್ಲೆಯ ಅಪರಾಧ ವರದಿ ಗಮನಿಸಿದಾಗ ಕೊಲೆ, ಹಲ್ಲೆಯಾಗುವರಿಗಿಂತ ಹೆಚ್ಚು ಬೈಕ್ ಅಪಘಾತದಲ್ಲಿ ಮೃತಪಟ್ಟಿರುವ ಸಂಖ್ಯೆ ಹೆಚ್ಚಿದೆ. ಹೊಸ ನಿಯಮದಂತೆ ಜು.1 ರಿಂದ ದಂಡ ವಿಧಿಸಲಾಗಲಿದ್ದು, ಬೈಕ್ ಸವಾರರು ಮತ್ತು ಆಟೋ ಚಾಲಕರು ಸಂಚಾರ ನಿಯಮಗಳನ್ನು ಪಾಲಿಸಿ ಸಂಯಮ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಹೆಲ್ಮೆಟ್ ವ್ಯಾಪಾರ ಜೋರು:
ಹೆಲ್ಮೆಟ್ ಕಡ್ಡಾಯಗೊಳಿಸುತ್ತಿದ್ದಂತೆ ಜಿಲ್ಲಾಕೇಂದ್ರದಲ್ಲಿ ಹೆಲ್ಮೆಟ್ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಜೋಡಿ ರಸ್ತೆ, ಸತ್ತಿ ರಸ್ತೆ, ಗುಂಡ್ಲುಪೇಟೆ ವೃತ್ತ, ರಾಮಸಮುದ್ರದ ರಸ್ತೆಗಳಲ್ಲಿ ಹೆಲ್ಮೆಟ್ ವ್ಯಾಪಾರಿಗಳು ಟೆಂಟ್ ಹಾಕಿದ್ದಾರೆ. ಹೆಲ್ಮೆಟ್ಗೆ ಬೇಡಿಕೆ ಸೃಷ್ಟಿಯಾಗಿರುವುದರಿಂದ ಜನರಿಂದ ಹೆಚ್ಚಿನ ದರ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೂಡ ಕೇಳಿಬಂದಿದೆ.