ಚಾಮರಾಜನಗರ : ಕೇರಳದ ವೈನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ, ಹಸಿರು ಕಾಡಲೆಲ್ಲ ಬರೀ ನೀರು ತುಂಬಿದೆ ಎಂದು ತಿಳಿದು ಬಂದಿದೆ.
ಕರ್ನಾಟಕದ ಕೇರಳ ಗಡಿಯಾದ ಮೂಲೆಹೊಳೆ ಚೆಕ್ಪೋಸ್ಟ್ನ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ನೀರಿನ ಹರಿವು ಕಡಿಮೆಯಾಗುವವರೆಗೆ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಮೂಳೆಹೊಳೆ ಆರ್ಎಫ್ಒ ಮಹಾದೇವಯ್ಯ ಈಟಿವಿ ಭಾರತದೊಂದಿಗೆ ಮಾತನಾಡಿ, ಇಂದು ನಮ್ಮ ಜೋರುಮಳೆಯೇನೂ ಬಂದಿಲ್ಲ. ಆದರೆ, ಮುತ್ತಂಗದಲ್ಲಿ ಸುರಿಯುತ್ತಿರುವ ನೀರು ನಮ್ಮ ಭಾಗಕ್ಕೂ ಹರಿದು ಬರುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿಯೂ ಕೂಡ ಕಾಡೊಳಗೆ ತೆರಳಲಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಕೇರಳದ ಗಡಿಗ್ರಾಮವಾದ ಪುನ್‌ಕುಳಿ ಗ್ರಾಮದಲ್ಲೂ 3-4 ಅಡಿ ನೀರು ನಿಂತಿದೆ. ಅಲ್ಲಿನ ದೇಗುಲ, ಕೆಲ ಟೀ ಅಂಗಡಿಗಳು ಜಲಾವೃತವಾಗಿವೆ ಎಂದು ಮೂಲಗಳು ಖಚಿತಪಡಿಸಿವೆ.