ಚಾಮರಾಜನಗರ: ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಕೆರೆ ಏರಿ ಒಡೆದು ನೂರಾರು ಎಕರೆ ಕೃಷಿ ಪ್ರದೇಶಕ್ಕೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿರುವ ಘಟನೆ ಯಳಂದೂರು ತಾಲೂಕಿನ ಯರಗಂಬಳ್ಳಿಯಲ್ಲಿ ನಡೆದಿದೆ.
ಕಳೆದ 3 ದಿನಗಳಿಂದ ಸುರಿಯುತ್ತಿರುವ ಜೋರು ಮಳೆಯಿಂದ ಯರಗಂಬಳ್ಳಿ ಮತ್ತು ಗಂಗವಾಡಿ ಗ್ರಾಮಕ್ಕೆ ಹೋಗುವ ಮಧ್ಯ ಇರುವ ಹುಳುಗೆರೆ ಕೆರೆ ಭರ್ತಿಯಾಗಿ ಏರಿ ಒಡೆದು ಜಮೀನುಗಳಿಗೆ ನೀರು ನುಗ್ಗಿದೆ. ನೀರಿನ ರಭಸಕ್ಕೆ ನಾಟಿ ಮಾಡಿದ ಭತ್ತ, ರಾಗಿ, ಕಬ್ಬು ಹಾಗೂ ತೆಂಗಿನ ಸಸಿಗಳು ನಾಶವಾಗಿದೆ. ವ್ಯವಸಾಯಕ್ಕೆ ಖರ್ಚು ಮಾಡಿದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ನಂಜನಾಯಕ ಎಂಬುವರು ಸಾಕಿದ್ದ 50ಕ್ಕೂ ಹೆಚ್ಚು ಕುರಿ, ಕೋಳಿಗಳೂ ಕೂಡ ನೀರಿನಲ್ಲಿ ಕೊಚ್ಚಿ ಹೋಗಿವೆ.
ಚಾಮರಾಜನಗರ ತಾಲೂಕಿನ ನಲ್ಲೂರುಮೋಳೆ ಗ್ರಾಮ ಅಕ್ಷರಶಃ ಕೆರೆಯಾಗಿದೆ. ಕೆರೆಯ ನೀರು ಊರಿನ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಜಾನುವಾರು ಕೊಟ್ಟಿಗೆಗಳಿಗೆ ಹಾನಿಯಾಗಿದೆ. ಚಾಮರಾಜನಗರ ತಾಲೂಕಿನ ಅಮ್ಮನಪುರ ಕೆರೆ ಬರೋಬ್ಬರಿ 30 ವರ್ಷಗಳ ಬಳಿಕ ತುಂಬಿ ಕೋಡಿ ಬಿದ್ದಿದೆ. ರಸ್ತೆ ಮೇಲೆ ನೀರು ಹರಿಯುತ್ತಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಯಳಂದೂರು ತಾಲೂಕಿನ ಕಂದಹಳ್ಳಿ, ಗಣಿಗನೂರು, ಯರಿಯೂರು, ಅಂಬಳೆ ಹಾಗೂ ಮದ್ದೂರು ಗ್ರಾಮಗಳ ಸುತ್ತಮುತ್ತಲಿನ ಕೃಷಿ ಭೂಮಿಗಳಲ್ಲಿ ನೀರು ಹರಿಯುತ್ತಿದ್ದು, ಫಸಲು ನಾಶವಾಗುವ ಆತಂಕ ಸೃಷ್ಟಿಸಿದೆ. ಹಲವು ಮನೆಗಳಿಗೂ ನೀರು ನುಗ್ಗಿದೆ. ಭಾರಿ ಪ್ರಮಾಣದಲ್ಲಿ ಜಲಾಶಯಗಳಿಗೆ ನೀರು ಹರಿದು ಬರುತ್ತಿರುವುದರಿಂದ ಸುರಕ್ಷತೆ ದೃಷ್ಟಿಯಿಂದ ಸುವರ್ಣಾವತಿ ಜಲಾಶಯದಿಂದ 1,400 ಕ್ಯುಸೆಕ್ ಹಾಗೂ ಚಿಕ್ಕಹೊಳೆ ಜಲಾಶಯದಿಂದ 200 ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಮುಂಗಾರು ಮಳೆ ಲೀಲೆ: ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ