ಚಾಮರಾಜನಗರ : ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಒಂದು ನಿಲುವಿಲ್ಲ. ಜಾತ್ಯಾತೀತತೆ ಏನಂದ್ರೆ ಅವರಿಗೆ ಗೊತ್ತಿಲ್ಲ ಎನ್ನುವ ಮೂಲಕ ಕಾಂಗ್ರೆಸ್ನವರದ್ದು ಸಾಫ್ಟ್ ಹಿಂದುತ್ವ ಎಂದಿದ್ದ ಹೆಚ್‌ಡಿಕೆಗೆ ಸಂಸದ ಡಿ.ಕೆ.ಸುರೇಶ್ ತಿರುಗೇಟು ಕೊಟ್ಟರು. ಹನೂರು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಗೋಹತ್ಯೆ ನಿಷೇಧ ಕಾಯ್ದೆಗೆ ಕುಮಾರಸ್ವಾಮಿ ಬೆಂಬಲ ಕೊಟ್ಟಿದ್ದರು.
ಅವರು ತಮ್ಮ ಅಜೆಂಡಾವನ್ನು ಮೊದಲು ಹೇಳಲಿ, ಅವರಲ್ಲಿ ತತ್ವವಿಲ್ಲ, ಜಾತ್ಯಾತೀತತೆ ನಿಲುವಿಲ್ಲ. ಅವರ ಮಾತಿಗೆ ಹೆಚ್ಚು ಪರಿಗಣನೆ ಕೊಡಬೇಕಿಲ್ಲ ಎಂದರು. ಜನತಾ ಜಲಧಾರೆ ಬಗ್ಗೆ ಪ್ರತಿಕ್ರಿಯಿಸಿ, ಅವರಿಗೆ ಒಳ್ಳೆಯದಾಗಲಿ, ಅವರು ದೊಡ್ಡವರು ಅವರ ಬಗ್ಗೆ ಹೆಚ್ಚು ಮಾತನಾಡಲ್ಲ. ಅವರು ಮಾಜಿ ಸಿಎಂ ಇದ್ದಾರೆ, ಮಾಜಿ ಪ್ರಧಾನಿಗಳಿದ್ದಾರೆ ಎಂದರು.
ಬಿಜೆಪಿಯಿಂದ ಗಲಭೆ ಸೃಷ್ಟಿ : 2023ಕ್ಕೆ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ. ಯಾವುದೇ ಅನುಮಾನ ಬೇಡ. ಆದ್ದರಿಂದಲೇ ಬಿಜೆಪಿಯು ಗಲಭೆ ಸೃಷ್ಟಿಸುತ್ತಿದೆ. ಹುಬ್ಬಳ್ಳಿ ಗಲಭೆ ಪ್ರಕರಣ ಮುಚ್ಚಿ ಹಾಕಲು ಸತತ ಸುಳ್ಳು ಹೇಳುತ್ತಿದ್ದು, ಬಿಜೆಪಿ ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಿಲ್ಲ ಎಂದರು. ಇದು ಶೇ.40ರಷ್ಟು ಕಮಿಷನ್ ಸರ್ಕಾರ ಎಂದು ನಾವು ಹೇಳುತ್ತಿಲ್ಲ. ಸ್ವಾಮೀಜಿಗಳು, ಗುತ್ತಿಗೆದಾರರು ಹೇಳುತ್ತಿದ್ದಾರೆ. ಇವರ ಜನವಿರೋಧಿ ಆಡಳಿತಕ್ಕೆ ಜನ ಬೇಸತ್ತಿದ್ದಾರೆ. ಸ್ವಾಮೀಜಿಗಳು ಕಮಿಷನ್ ವಿಚಾರದಲ್ಲಿ ಸತ್ಯವನ್ನೇ ಮಾತನಾಡಿದ್ದು, ಅವರಿಗಾದ ನೋವು ತೋಡಿಕೊಂಡಿದ್ದಾರೆ ಎಂದು ದಿಂಗಾಲೇಶ್ವರ ಶ್ರೀ ಪರ ಬ್ಯಾಟ್ ಬೀಸಿದರು.
ಅಶ್ವತ್ಥ್ ನಾರಾಯಣ ಟ್ವೀಟಿಗೆ ಟಾಂಗ್ : 'ತಿಹಾರ ಜೈಲಲ್ಲಿದ್ದವರಿಗೆ ಕೆಪಿಸಿಸಿ ಪಟ್ಟ-ದುಬಾರಿ ವಾಚ್ ಧರಿಸಿದವರು ಸಿಎಂ ಕ್ಯಾಂಡಿಡೇಟ್' ಎಂಬ ಸಚಿವ ಡಾ.ಅಶ್ವತ್ಥ್ ನಾರಾಯಣ ಟ್ವೀಟಿಗೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ಅವರನ್ನು ಬಿಜೆಪಿಯವರು ಎಲ್ಲಿಂದ ಕರೆತಂದರು?, ಎಷ್ಟು ಮಂದಿ ಲಂಚ-ಮಂಚ ಸಿಡಿ ಬಿತ್ತರಿಸಬಾರದೆಂದು ಸ್ಟೇ ತಂದಿದ್ದಾರೆ?. ಅವೆಲ್ಲವೂ ಹೊರಗಡೆ ಬಂದರೆ ಸಿಡಿ ಬಾಯ್ಸ್, ಬಾಂಬೆ ಬಾಯ್ಸ್, ಬ್ಲ್ಯೂಬಾಯ್ಸ್ ಎಲ್ಲವೂ ಹೊರಗಡೆ ಬರಲಿವೆ ಎಂದು ತಿರುಗೇಟು ಕೊಟ್ಟರು.
ಮಹಾನ್ ನಾಯಕನ ಕೈವಾಡ ಎಂದು ಹೇಳಿಕೆ ಕೊಟ್ಟಿದ್ದ ರಮೇಶ್ ಜಾರಕಿಹೊಳಿ ಮಾತಿಗೆ ಕಿಡಿಕಾರಿದ ಡಿ.ಕೆ.ಸುರೇಶ್, ಅವರು ಎಲ್ಲವನ್ನೂ ಬಿಚ್ಚಿ ತೋರಿಸಿದ್ದನ್ನೂ ಮಾಧ್ಯಮಗಳು ಏಕೆ ತೋರಿಸುತ್ತಿಲ್ಲ. ಎಲ್ಲಾ ಆಸನಗಳನ್ನು ತೋರಿಸಿದ್ದಾರೆ. ಅವರು ಅದಕ್ಕಿಂತ ರಾಜ್ಯದ ಜನರಿಗೆ ಬೇಕಾ ಎಂದು ಕಿಡಿಕಾರಿದರು.
ಹಳ್ಳ ಹಿಡಿದ ತನಿಖೆ : ಭ್ರಷ್ಟಾಚಾರ ಪ್ರಕರಣದ ಆರೋಪಿಯನ್ನು ಸಿಎಂ ತಮ್ಮ ಪಕ್ಕದಲ್ಲಿ ಕೂರಿಸಿಕೊಳ್ಳುತ್ತಾರೆ. ಗೃಹ ಸಚಿವ ಸಾಂತ್ವನ ಹೇಳುತ್ತಾರೆ. ಹೀಗಾದರೆ, ನ್ಯಾಯ ಎಲ್ಲಿ ಸಿಗಲು ಸಾಧ್ಯ?. ತನಿಖೆ ಹಾದಿ ತಪ್ಪಿದೆ, ಕೂಡಲೇ ಈಶ್ವರಪ್ಪ ಅವರನ್ನು ಬಂಧಿಸಿಬೇಕು ಎಂದು ಒತ್ತಾಯಿಸಿದರು.