ಚಾಮರಾಜನಗರ: ಖಾಸಗಿ ಚಾನೆಲಿನಲ್ಲಿ ಸಂಗೀತ ಕಾರ್ಯಕ್ರಮದಲ್ಲಿ ಮಿಂಚಿ ಜನರ ಮನೆ ಮಾತಾದ ಗಾಯಕ ಹನುಮಂತ ಕಾಡಿನ ತಾಂಡದಲ್ಲಿ ಜನಪದ ಸುಧೆಯನ್ನು ಹರಿಸಿದರು.
ಚಾಮರಾಜನಗರ ತಾಲೂಕಿನ ಮೂಕನ ಪಾಳ್ಯ ಎಂಬ ಕಾಡಂಚಿನ ಗ್ರಾಮದಲ್ಲಿ ಬಂಜಾರ ಸಮುದಾಯದ ಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು 7ಕ್ಕೂ ಹೆಚ್ಚು ಗೀತೆಗಳನ್ನು ಪ್ರಸ್ತುತಪಡಿಸಿದರು. ನಿನ್ನೊಳಗ ನೀನು ತಿಳಿದು ನೋಡಣ್ಣ, ತರವಲ್ಲ ತಗಿ ನಿನ್ನ, ಸಂತ ಸೇವಾಲಾಲ್ ಹೀಗೆ ಒಂದೊಂದು ಹಾಡು ಹಾಡುತ್ತಿದ್ದಂತೆ ತಾಂಡಾದ ಯುವ ಜನರು ಹುಚ್ಚೆದ್ದು ಕುಣಿದರು.
ಈ ಕುರಿತು ಬಂಜಾರ ಸಮುದಾಯದ ಮುಖಂಡ ಮೋಹನ್ ಮೆಘಾವತ್ ಸುದ್ದಿಗಾರರೊಂದಿಗೆ ಮಾತನಾಡಿ, ಹಾವೇರಿ ಜಿಲ್ಲಾ ಚುನಾವಣಾ ರಾಯಭಾರಿಯೂ ಆಗಿರುವ ಹನುಮಂತಪ್ಪ ಲಂಬಾಣಿ ಸಮುದಾಯದ ಹೆಮ್ಮೆಯಾಗಿದ್ದಾರೆ, ಜಿಲ್ಲೆಗೆ ಕರೆಸಿ ಅವರನ್ನು ಸನ್ಮಾನಿಸುವುದು ಎಲ್ಲರ ಹೆಬ್ಬಯಕೆಯಾದ್ದರಿಂದ ಈ ಮಹೋತ್ಸವದಲ್ಲಿ ಅವರನ್ನು ಕರೆಸಿ ಗೌರವ ನೀಡಿ ಅವರ ಗಾಯನ ಏರ್ಪಡಿಸಿದ್ದೇವೆ ಎಂದರು.
ಹಳ್ಳಿ ಪ್ರತಿಭೆ ಹನುಮಂತ ಅವರನ್ನು ಕಾಣಲು ಹಾಗೂ ಸೆಲ್ಫಿ ತೆಗೆದುಕೊಳ್ಳಲು ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಮಹೋತ್ಸವದಲ್ಲಿ ಸೇರಿದ್ದರು. ಮಿಮಿಕ್ರಿ ಗೋಪಿ ಅವರ ತಂಡವು ಜನರನ್ನು ನಗೆಗಡಲಿನಲ್ಲಿ ತೇಲಿಸಿತು.