ಚಾಮರಾಜನಗರ: ರೋಚಕ ಹಣಾಹಣಿಯಲ್ಲಿ 8 ನೇ ವಾರ್ಡಿನಿಂದ ಗೆದ್ದ ಪಕ್ಷೇತರ ಅಭ್ಯರ್ಥಿ ಶಶಿಧರ್ ದೀಪು ಬೆಂಬಲಿಗರು ಪಟಾಕಿ ಸಿಡಿಸಿದ್ದಕ್ಕೆ ಕೆಲಹೊತ್ತು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ.
ಸಂಭ್ರಮಾಚರಣೆ ವೇಳೆ ಶಶಿಧರ ದೀಪು ಬೆಂಬಲಿಗರು ಪಟಾಕಿ ಸಿಡಿಸಿದ್ದರಿಂದ ಪರಾಜಿತ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ಬೆಂಬಲಿಗರು ತಗಾದೆ ತೆಗೆದು, ಮಾತಿನ ಚಕಮಕಿ ನಡೆಸಿದ್ದರಿಂದ ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು ಎನ್ನಲಾಗಿದೆ.
ಇದೇ ವೇಳೆ ವಾರ್ಡಿನ ಮಹಿಳೆಯರು ಪಟಾಕಿ ಸಿಡಿಸಬಾರದು, ವೃದ್ಧರಿಗೆ ತೊಂದರೆಯಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರೂ ಪಟಾಕಿ ಸಿಡಿಸಿದ್ದಕ್ಕೆ ಕಿಡಿಕಾರಿದ್ದಾರೆ. ಸೂಕ್ತ ಸಮಯಕ್ಕೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಕಳೆದ ಬಾರಿ ಈ ವಾರ್ಡಿನಿಂದ ಬಿಜೆಪಿ ಅಭ್ಯರ್ಥಿ ಗೆದ್ದಿದ್ದರು. ಆದರೆ, ಈ ಸಾರಿ ಪಕ್ಷೇತರ ಅಭ್ಯರ್ಥಿಗೆ ಗೆಲುವಾಗಿದೆ.