ಚಾಮರಾಜನಗರ: ಖಾಸಗಿ ಶಿಕ್ಷಣ ಸಂಸ್ಥೆಗಳು ನಡೆಸುತ್ತಿರುವ ಆನ್ಲೈನ್ ಶಿಕ್ಷಣ ಯಾವ ರೀತಿ ಇರಬೇಕೆಂಬ ಮಾರ್ಗಸೂಚಿ ಪ್ರಕಟಿಸಿ ನಾಳೆ ಆದೇಶ ಹೊರಡಿಸಲಾಗುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ಡೌನ್ ವೇಳೆ ಪ್ರಚಲಿತವಾದ ಆನ್ಲೈನ್ ಶಿಕ್ಷಣ ಕುರಿತು, ಪಾಲಕರು ಭಿನ್ನ ಅಭಿಪ್ರಾಯ ಹೊಂದಿದ್ದಾರೆ. LKG-UKG ಮಕ್ಕಳಿಗೆ ಆನ್ಲೈನ್ ಪಾಠ ಮಾಡುತ್ತಿರುವ ಕುರಿತು ಬಹಳಷ್ಟು ಮಂದಿ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ನಿಮ್ಹಾನ್ಸ್ ನಿರ್ದೇಶಕರು ಕೂಡ ಒಂದು ವರದಿ ನೀಡಿದ್ದು 6 ವಯಸ್ಸಿನೊಳಗಿನ ಮಕ್ಕಳಿಗೆ ಆನ್ಲೈನ್ ಶಿಕ್ಷಣ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಹೇಳಿದ್ದರು. ಹಾಗಾಗಿ, ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸರ್ಕಾರ ಆದೇಶ ಹೊರಡಿಸಲಿದೆ ಎಂದು ತಿಳಿಸಿದರು.
ಶಾಲೆ ಪುನರಾರಂಭ ಕುರಿತು ಸರ್ಕಾರ ಇನ್ನೂ ನಿರ್ಧರಿಸಿಲ್ಲ. ಕೇಂದ್ರ ಸರ್ಕಾರದ ಸುತ್ತೋಲೆಯಂತೆ ಪಾಲಕರ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಯಾವಾಗ ಶಾಲೆ ತೆರೆಯಬೇಕು? ಯಾವ ತರಗತಿಗಳನ್ನು ಆರಂಭಿಸಬಹುದು? ಎಂಬ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಶಾಲೆ ತೆರೆಯುವ ಬಗ್ಗೆ ಸರ್ಕಾರ ನಿರ್ಧರಿಸಲಿದೆ ಎಂದರು.