ಚಾಮರಾಜನಗರ: ಜಿ.ಪರಮೇಶ್ವರ್ ಅಭಿಮಾನಿ ಬಳಗ ಹಾಗೂ ಪರಮೇಶ್ವರ್ ಯುವ ಸೈನ್ಯದ ವತಿಯಿಂದ ಗುಂಡ್ಲುಪೇಟೆ ತಾಲೂಕಿನ ಬೆಂಡರವಾಡಿಯಲ್ಲಿ 28 ಜೋಡಿಗಳಿಗೆ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.
ಮಾಜಿ ಡಿಸಿಎಂ ಜಿ.ಪರಮೇಶ್ವರ್ ಹಾಗೂ ಕನ್ನಿಕಾ ಪರಮೇಶ್ವರ್ ದಂಪತಿ ನೂತನ ವಧು ವರರಿಗೆ ಮಾಂಗಲ್ಯಸೂತ್ರ ನೀಡಿ ಹರಸಿದರು. ಇನ್ನು ಸಾಮೂಹಿಕ ವಿವಾಹದಲ್ಲಿ ವಿಶೇಷಚೇತನ ವರನನ್ನು ಯುವತಿಯೊಬ್ಬಳು ವರಿಸಿದಳು. 28 ಜೋಡಿಗಳಲ್ಲಿ 13 ಜೋಡಿ ಅಂತರ್ಜಾತಿ ವಿವಾಹವಾಗಿದ್ದು ವಿಶೇಷವಾಗಿತ್ತು.
ಸಮಾರಂಭದಲ್ಲಿ ಮಾಜಿ ಡಿಸಿಎಂ ಜಿ.ಪರಮೇಶ್ವರ್ ಮಾತನಾಡಿ, ಬೆಂಡರವಾಡಿ ಗ್ರಾಮವನ್ನು ದತ್ತು ತೆಗೆದುಕೊಳ್ಳುವೆ. ಸ್ಥಳೀಯ ಶಾಸಕರು ನನ್ನೊಂದಿಗೆ ಕೈ ಜೋಡಿಸಬೇಕು, ಗ್ರಾಮಾಭಿವೃದ್ಧಿ ಮಾಡುವ ಜವಾಬ್ದಾರಿ ನನ್ನ ಮೇಲಿದೆ. ನಾನು ಮತ್ತು ನನ್ನ ಪತ್ನಿ ಸೇರಿ ದತ್ತು ಪಡೆಯುತ್ತೇವೆ. ನನ್ನ ತಂದೆ ಈ ಗ್ರಾಮದ ಅಭಿವೃದ್ಧಿ ಮಾಡುವಂತೆ ಮಾತು ಕೊಟ್ಟಿದ್ದರು ಎಂದು ಹೇಳಿದರು.
ಇದಕ್ಕೂ ಮುನ್ನಾ ಶಿಕ್ಷಣ ಭೀಷ್ಮ ಎಚ್.ಎಂ.ಗಂಗಾಧರಯ್ಯ ಸ್ಮಾರಕ ಗ್ರಂಥಾಲಯ ಉದ್ಘಾಟಿಸಿ, ಎಚ್.ಎಂ.ಗಂಗಾಧರಯ್ಯ ರಾಷ್ಟ್ರೀಯ ಸಂಸ್ಕೃತಿ ಪುರಸ್ಕಾರ ಪ್ರದಾನ ಮಾಡಿದರು.
ಈ ವೇಳೆ ಚಿತ್ರನಟ ಚೇತನ್ ದಂಪತಿ, ನಿವೃತ್ತ ಐಎಫ್‍ಎಸ್ ಅಧಿಕಾರಿ ಡಾ.ರಾಜು ದಂಪತಿ, ನಿವೃತ್ತ ಐಪಿಎಸ್ ಅಧಿಕಾರಿ ಸುಭಾಷ್ ಭರಣಿ ದಂಪತಿ, ಶಾಸಕರಾದ ನಿರಂಜಕುಮಾರ್, ಹರ್ಷವರ್ಧನ್, ರಂಗಭೂಮಿ ಕಲಾವಿದರಾದ ಮಂಡ್ಯ ರಮೇಶ್, ಜನಾರ್ದನ ಜನ್ನಿ ಇನ್ನಿತರರು ಇದ್ದರು.