ಕೊಳ್ಳೇಗಾಲ/ ಚಾಮರಾಜನಗರ: ಈ ಬಾರಿಯ SSLC ಪರೀಕ್ಷೆಯಲ್ಲಿ 600 ಕ್ಕೂ ಹೆಚ್ಚು ಅಂಕ ಪಡೆದು ತೇರ್ಗಡೆ ಹೊಂದುವ ವಿದ್ಯಾರ್ಥಿಗಳಿಗೆ ಮಾನಸ ಶಿಕ್ಷಣ ಸಂಸ್ಥೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ (ಕಲಾ, ವಾಣಿಜ್ಯ, ವಿಜ್ಞಾನ ವಿಭಾಗ) ವ್ಯಾಸಂಗ ಮಾಡಲು ಇಚ್ಛಿಸುವವರಿಗೆ ಉಚಿತ ಪ್ರವೇಶಾತಿ ನೀಡಲಾಗುತ್ತದೆ ಎಂದು ಸಂಸ್ಥೆಯ ಕಾರ್ಯದರ್ಶಿ ಡಾ. ದತ್ತೇಶ್ ಕುಮಾರ್ ಘೋಷಿಸಿದ್ದಾರೆ.
ಮಾನಸ ಶಿಕ್ಷಣ ಸಂಸ್ಥೆಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಮಾನಸ ಶಿಕ್ಷಣ ಸಂಸ್ಥೆಯು ಶೈಕ್ಷಣಿಕ ಅಭಿವೃದ್ಧಿಗಾಗಿ ಪೂರಕವಾಗಿ ಹಲವು ವರ್ಷಗಳಿಂದ ಶ್ರಮಿಸುತ್ತಿದೆ. ಇದರ ಮುಂದುವರೆದ ಭಾಗವಾಗಿ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 600 ಕ್ಕೂ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಎರಡು ವರ್ಷದ ಪಿಯುಸಿ ವ್ಯಾಸಂಗಕ್ಕೆ ಉಚಿತವಾಗಿ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಹೇಳಿದ್ದಾರೆ.
ಚಾಮರಾಜನಗರ ಸೇರಿದಂತೆ ಯಾವುದೇ ಜಿಲ್ಲೆ ಹಾಗೂ ತಾಲೂಕಿನ ಮಕ್ಕಳು ಈ ಸೌಲಭ್ಯವನ್ನು ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದರು. ನಮ್ಮ ಕಾಲೇಜಿನ ವಾಣಿಜ್ಯ ವಿಭಾಗದ ಪಿಯುಸಿ ವಿದ್ಯಾರ್ಥಿಗಳಿಗೆ ಸಿಎ ಫೌಂಡೇಶನ್ ಕೋರ್ಸ್ ಹಾಗೂ ಡಿಗ್ರಿ (ಬಿ.ಕಾಂ, ಬಿಬಿಎ) ವಿದ್ಯಾರ್ಥಿಗಳಿಗೆ ಸಿಎ ಇಂಟರ್ಮಿಡಿಯಟ್ ಕೋರ್ಸ್, ಸಿಎಸ್ ಕೋರ್ಸ್, ಐಸಿಡ್ಲ್ಯೂ ಕೋರ್ಸ್, ಬ್ಯಾಕಿಂಗ್ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವಂತೆ ಐದು ವರ್ಷಗಳ ಕಾಲ ಉಚಿತ ಕೋಚಿಂಗ್ ಕ್ಲಾಸ್ (ಬೋಧನ ವ್ಯವಸ್ಥೆ) ನೀಡಲಾಗುವುದು ಎಂದು ಹೇಳಿದ್ದಾರೆ.
ಜೊತೆಗೆ ಬಿಕಾಂ, ಬಿಬಿಎ ಕೊನೆಯ ವರ್ಷದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ (ಎಂ.ಬಿ.ಎ ಮತ್ತು ಎಂಕಾಂ) ಸೇರಲು ಅನುಕೂಲವಾಗುವಂತೆ ಉಚಿತವಾಗಿ ಸಿಇಟಿ ಕ್ಲಾಸ್ ನಡೆಸಲಾಗುತ್ತದೆ. ಗ್ರಾಮೀಣ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸಂಸ್ಥೆಯು ಈ ತೀರ್ಮಾನ ಕೈಗೊಂಡಿದೆ ಎಂದು ತಿಳಿಸಿದ್ದಾರೆ.
ನಗದು ಬಹುಮಾನ : ಮಾನಸ ಫೌಂಡೇಶನ್ ವತಿಯಿಂದ ಕೊಳ್ಳೇಗಾಲ ಮತ್ತು ಹನೂರು ತಾಲೂಕು ವ್ಯಾಪ್ತಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 600ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ 1000 ರೂ. ನಗದು ಬಹುಮಾನ ನೀಡಲು ತೀರ್ಮಾನಿಸಲಾಗಿದೆ. ಅದರಂತೆ ಶೇ.100 ರಷ್ಟು ಫಲಿತಾಂಶ ಪಡೆದ ಶಾಲೆಗಳ ಶಿಕ್ಷಕ ವೃಂದಕ್ಕೆ ಸನ್ಮಾನಿಸಿ ಗೌರವಿಸಲಾಗುತ್ತದೆ ಎಂದರು.
ಓದಿ : SSLC ಪರೀಕ್ಷೆ: 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೈರು.. ಹಿಜಾಬ್ ತೆಗೆಯದ ಮೇಲ್ವಿಚಾರಕಿ ಅಮಾನತು