ಚಾಮರಾಜನಗರ: "ರಾಜ್ಯದ ಮುಖ್ಯಮಂತ್ರಿಗಳಲ್ಲಿ ಅತಿ ಹೆಚ್ಚು ಸುಳ್ಳು ಹೇಳುವ ಮುಖ್ಯಮಂತ್ರಿ ಎಂದರೆ ಅದು ಸಿದ್ದರಾಮಯ್ಯ" ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಎಂ ರಮೇಶ್ ಕಿಡಿಕಾರಿದರು. ಚಾಮರಾಜನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಹಿಂದೆ ಹೆಚ್ಚು ಸುಳ್ಳು ಹೇಳುವ ಮುಖ್ಯಮಂತ್ರಿ ಎಂದರೆ ವೀರಪ್ಪ ಮೊಯ್ಲಿ ಎಂದು ಹೇಳುತ್ತಿದ್ದರು, ಆದರೆ ಸಿದ್ದರಾಮಯ್ಯ ಅವರ ದುಪ್ಪಟ್ಟು ಸುಳ್ಳು ಹೇಳುತ್ತಾರೆ" ಎಂದು ಟೀಕಿಸಿದರು.
"ಪ್ರಜಾಪ್ರಭುತ್ವದ ಬಗ್ಗೆ, ರಾಜ್ಯ ಸರ್ಕಾರದ ನಿಯಮಗಳ ಬಗ್ಗೆ ಅವರು ಬಹಳಷ್ಟು ಮಾತನಾಡುತ್ತಾರೆ. ಅವರ ಕ್ಷೇತ್ರ ಟಿ ನರಸೀಪುರ ಪುರಸಭೆಯಲ್ಲಿ ಎಲೆಕ್ಟೆಡ್ ಕೌನ್ಸಿಲರ್ ಇದ್ದಾರೆ. ಅವರ ಕ್ಷೇತ್ರದಲ್ಲೇ ಒಬ್ಬ ನಾನ್ ಆಫಿಷಿಯಲ್ ಚುನಾಯಿತ ಪ್ರತಿನಿಧಿಯನ್ನು ಅಧ್ಯಕ್ಷನನ್ನಾಗಿ ಮಾಡುವುದಕ್ಕೆ ಅವರಿಗೆ ಪುರುಸೊತ್ತಿಲ್ಲ. ದಿನ ಬೆಳಗಾದರೆ ಪ್ರಧಾನಿಯನ್ನು ಟೀಕೆ ಮಾಡುತ್ತಾರೆ. ಅವರಿಗೆ ದೌಲತ್ತು ಗೊತ್ತಿದೆ, ಕರ್ತವ್ಯದ ಬಗ್ಗೆ ವಿಪರೀತ ಸುಳ್ಳು ಹೇಳುತ್ತಾರೆ" ಎಂದು ಹರಿಹಾಯ್ದಿದ್ದರು.
"ಸಮಾನತೆ ಬಗ್ಗೆ ದಿನವೂ ಮಾತನಾಡುವ ಸಿದ್ದರಾಮಯ್ಯ ಎಡಗೈ ಸಮುದಾಯಕ್ಕೆ ಕೇವಲ ಎರಡು ಸಚಿವ ಸ್ಥಾನ ಕೊಟ್ಟಿದ್ದಾರೆ, ಸಿದ್ದರಾಮಯ್ಯ ಅವರಿಂದ ಸಾಮಾಜಿಕ ನ್ಯಾಯ ಸಿಗುತ್ತಿಲ್ಲ ಎಂದು ಆರೋಪಿಸಿದರು. ನನ್ನ ಪ್ರಕಾರ ಮಹಾತ್ಮ ಗಾಂಧೀಜಿ ಅವರ ಕಾಲದ ಕಾಂಗ್ರೆಸ್ ಈಗ ಇಲ್ಲ. ಈಗ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರ ಕಾಂಗ್ರೆಸ್ ಇದೆ. ನಾನು ಬಿಜೆಪಿ ಕಾರ್ಯಕರ್ತನಾಗಿದ್ದರೂ ಮಹಾತ್ಮ ಗಾಂಧೀಜಿ ಅವರ ಕಾಂಗ್ರೆಸ್ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದೇನೆ. ಆದ್ದರಿಂದಲೇ ನನಗೆ ಹೆಚ್ಚು ರಾಜಕೀಯ ಸ್ಥಾನಮಾನ ಸಿಕ್ಕಿಲ್ಲ, ಇದರ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ" ಎಂದರು.
"ಕಿಯೋನಿಕ್ಸ್ನ ಒಬ್ಬ ಐಎಎಸ್ ಅಧಿಕಾರಿ 4 ಕೋಟಿ ಲಂಚ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ, ಲಂಚ ಕೊಟ್ಟ ಅಧಿಕಾರಿಯನ್ನು ಹತ್ತು ದಿನ ಕಡ್ಡಾಯ ರಜೆ ಮೇಲೆ ಕಳುಹಿಸಿದ್ದಾರೆ. ಇದು ಯಾವ ರೀತಿಯ ಶಿಕ್ಷೆ ?. ಲಂಚ ಕೊಟ್ಟು ಈ ಸ್ಥಾನಕ್ಕೆ ಬಂದಿದ್ದೇನೆ ಎಂದಿರುವ ಕಿಯೋನಿಕ್ಸ್ ಅಧಿಕಾರಿ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಾ?. ನಿಮ್ಮ ನಡೆ ಮುಖ್ಯಮಂತ್ರಿ ಸ್ಥಾನಕ್ಕೆ ಗೌರವ ತರುವುದಿಲ್ಲ" ಎಂದರು. "ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆಯೇ ಹೊರತು ಸಿದ್ದರಾಮಯ್ಯ ನಾಯಕತ್ವದಿಂದಲ್ಲ, ಸಿದ್ದರಾಮಯ್ಯ ಸದ್ಯದಲ್ಲೇ ತಮ್ಮ ಸ್ಥಾನ ತ್ಯಜಿಸಲಿದ್ದಾರೆ. ಮೂಲ ಕಾಂಗ್ರೆಸ್ ನವರು ಅಧಿಕಾರ ಹಿಡಿಯುತ್ತಾರೆ" ಎಂದು ಹೇಳಿದರು.
"ಈ ಬಾರಿ ಎಡಗೈ ಸಮಾಜಕ್ಕೆ ಬಿಜೆಪಿ ಅವಕಾಶ ಮಾಡಿಕೊಡಬೇಕು. ನಾನು ಕೂಡ ಚಾಮರಾಜನಗರದ ಎಂಪಿ ಟಿಕೆಟ್ ಆಕಾಂಕ್ಷಿಯಾಗಿದ್ದು, ನನಗೆ ಈ ಬಾರಿ ಅವಕಾಶ ಕೊಡುವ ಭರವಸೆ ಇದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮುಗಿಬಿದ್ದ ಕೇಸರಿ ಪಡೆ: ಬೆಳಗಾವಿಯಲ್ಲಿ ಡಿಸಿ ಕಚೇರಿ ಮುಂದೆ ಧರಣಿ ಕುಳಿತ ಬಿಜೆಪಿ