ಚಾಮರಾಜನಗರ: ಮಾಕಳಿ ಬೇರು ಕಳ್ಳರು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಪ್ರತಿದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ ಘಟನೆ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ನಡೆದಿದ್ದು, ಮೂವರು ಖದೀಮರನ್ನು ಬಂಧಿಸಲಾಗಿದೆ.
ಗುಂಡ್ಲುಪೇಟೆ ತಾಲೂಕಿನ ಜಕ್ಕಳ್ಳಿ ಗ್ರಾಮದ ಪರಿಯನಾಯಗಂ, ಸೊಸೈರಾಜು, ಸಿ.ರಾಜು ಎಂಬುವವರನ್ನು ಬಂಧಿಸಲಾಗಿದ್ದು, ಮತ್ತಿಬ್ಬರು ಪರಾರಿಯಾಗಿದ್ದಾರೆ. ಈ ಖದೀಮರು ಯಳಂದೂರು ತಾಲೂಕಿನ ಕೆ.ದೇವರಹಳ್ಳಿ ಗ್ರಾಮದ ಬಳಿ ಅಕ್ರಮವಾಗಿ ಮಾಕಳಿ ಬೇರು ಸಾಗಿಸುತ್ತಿದ್ದರು.
ಈ ಕುರಿತಂತೆ ಖಚಿತ ಮಾಹಿತಿ ಪಡೆದ ಯಳಂದೂರು ವಲಯ ಅರಣ್ಯಾಧಿಕಾರಿ ಲೋಕೇಶ್ ಮತ್ತು ತಂಡ ದಾಳಿ ಮಾಡಿದ್ದಾರೆ. ಈ ವೇಳೆ ಕಾರಿನಲ್ಲಿ ಬರುತ್ತಿದ್ದ ಕಳ್ಳರಿಬ್ಬರು ಅರಣ್ಯ ಇಲಾಖೆ ಜೀಪಿಗೆ ಗುದ್ದಿದ್ದಾರೆ. ಗುದ್ದಿದ ರಭಸಕ್ಕೆ ಬೊಲೆರೋ ವಾಹನ ಜಖಂಗೊಂಡಿದೆ. ಕಾರಿನ ಮುಂಭಾಗವೂ ನಜ್ಜುಗುಜ್ಜಾಗಿದ್ದರಿಂದ ಕಾರನ್ನು ಅಲ್ಲೇ ಬಿಟ್ಟು ಇಬ್ಬರು ಪರಾರಿಯಾಗಿದ್ದಾರೆ.
ಸದ್ಯ ಕಳ್ಳರಿಂದ ಬರೋಬ್ಬರಿ 935 ಕೆಜಿ ಮಾಕಳಿ ಬೇರು, ಟಾಟಾ ಏಸ್ ಹಾಗೂ ಇಯಾನ್ ಕಾರನ್ನು ವಶಪಡಿಸಿಕೊಂಡಿದ್ದು, ಪರಾರಿಯಾಗಿರುವ ಇಬ್ಬರ ಪತ್ತೆಗಾಗಿ ಅರಣ್ಯ ಇಲಾಖೆ ಬಲೆ ಬೀಸಿದೆ.