ಚಾಮರಾಜನಗರ : ಕಾಡಾನೆ ಜೊತೆ ಸೆಲ್ಪಿ ಕ್ಲಿಕ್ಕಿಸಿಕೊಂಡ ಇಬ್ಬರು ಪ್ರವಾಸಿಗರಿಗೆ ಅರಣ್ಯ ಇಲಾಖೆ 20 ಸಾವಿರ ದಂಡ ವಿಧಿಸಿದೆ. ತೆಲಂಗಾಣ ನಿಜಾಂಪೇಟೆ ನಿವಾಸಿಗಳಾದ ದಿಲೀಪ್ ಕುಮಾರ್ (42) ಹಾಗೂ ಶ್ಯಾಂಪ್ರಸಾದ್(31) ಎಂಬವರಿಗೆ ದಂಡ ವಿಧಿಸಿದೆ.
ಬುಧವಾರ ಸಂಜೆ ಈ ಇಬ್ಬರು ತಮ್ಮ ಕಾರಿನಲ್ಲಿ ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಮೂಲಕ ಕೊಯಮತ್ತೂರಿಗೆ ತೆರಳುತ್ತಿದ್ದರು. ಈ ವೇಳೆ ಆಸನೂರು ಬಳಿ ರಸ್ತೆ ಬದಿಯಲ್ಲಿ ಕಾಡಾನೆ ನಿಂತಿದ್ದನ್ನು ಕಂಡಿದ್ದಾರೆ. ಈ ವೇಳೆ ಕಾರಿನಿಂದ ಇಳಿದ ಇವರು ಕಾಡಾನೆಯ ತೀರಾ ಸಮೀಪ ಹೋಗಿ ಸೆಲ್ಪಿ ಕ್ಲಿಕ್ಕಿಸಿಕೊಂಡಿದ್ದಾರೆ. ಇದನ್ನು ಗಸ್ತು ತಿರುಗುತ್ತಿದ್ದ ತಮಿಳುನಾಡಿನ ಅರಣ್ಯ ಇಲಾಖೆ ಸಿಬ್ಬಂದಿ ಕಂಡಿದ್ದಾರೆ. ಇನ್ನೇನೂ ವಿಚಾರಿಸಬೇಕು ಎನ್ನುವಷ್ಟರಲ್ಲಿ ಇಬ್ಬರು ಕಾರು ಹತ್ತಿ ಪರಾರಿಯಾಗಿದ್ದರು.
ಬಳಿಕ, ಈ ಬಗ್ಗೆ ಬಣ್ಣಾರಿ ಚೆಕ್ ಪೋಸ್ಟ್ ಗೆ ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ರವಾನಿಸಿದ್ದಾರೆ. ಅಲ್ಲಿ ಇವರ ಕಾರನ್ನು ಅಡ್ಡ ಹಾಕಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಬೇಜವಾಬ್ದಾರಿ ತೋರಿದ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳು ಇಬ್ಬರಿಗೂ ತಲಾ 10 ಸಾವಿರ ರೂ. ದಂಡ ವಿಧಿಸಿ, ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆಸನೂರು ವಲಯ ಅರಣ್ಯಾಧಿಕಾರಿ ಪಾಂಡಿರಾಜನ್,' ರಾಷ್ಟ್ರೀಯ ಹೆದ್ದಾರಿಯಲ್ಲಿ ಆಗಾಗ್ಗೆ ಕಾಡಾನೆ ಕಾಣಿಸಿಕೊಳ್ಳುತ್ತದೆ. ವಾಹನ ಸವಾರರು ಆದಷ್ಟು ಜಾಗರೂಕರಾಗಿ ವಾಹನ ಚಾಲನೆ ಮಾಡಬೇಕು. ಕೆಲವರು ಕೀಟಲೆ ಮಾಡಿ, ಫೋಟೋ ವಿಡಿಯೋ ತೆಗೆದುಕೊಳ್ಳಲು ಹೋಗಿ ಪ್ರಾಣಕ್ಕೇ ಕುತ್ತು ತಂದುಕೊಳ್ಳುತ್ತಿದ್ದಾರೆ. ಈ ರೀತಿ ಕಾಡಾನೆ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋದ ತೆಲಂಗಾಣದ ಇಬ್ಬರಿಗೆ ದಂಡ ವಿಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕುಡಿದ ಮತ್ತಿನಲ್ಲಿ ಆನೆ ಕಾಲಿಗೆ ಬಿದ್ದ ವ್ಯಕ್ತಿಗೆ ದಂಡ : ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ರಸ್ತೆ ಬದಿಯಲ್ಲಿದ್ದ ಆನೆ ಬಳಿಗೆ ತೆರಳಿ ಕೈ ಮುಗಿದು ಪ್ರಾರ್ಥಿಸಿದ್ದ ಘಟನೆ ತಮಿಳುನಾಡಿನಲ್ಲಿ ನಡೆದಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆ ಅರಣ್ಯ ಇಲಾಖೆ ಈ ವ್ಯಕ್ತಿಗೆ 10 ಸಾವಿರ ದಂಡ ವಿಧಿಸಿತ್ತು.
ಧರ್ಮಪುರಿ ಜಿಲ್ಲೆಯ ಪೆನ್ನಾಗರಂ ಪಕ್ಕದ ಹೊಗೇನಕಲ್ ರಸ್ತೆಯಲ್ಲಿ ಕಾಡಾನೆಯೊಂದು ನಿಂತಿತ್ತು. ಇದನ್ನು ಕಂಡ ಪಾನಮತ್ತನಾಗಿದ್ದ ವ್ಯಕ್ತಿ ಏಕಾಏಕಿ ಆನೆಯ ಬಳಿ ತೆರಳಿ, ಕಣ್ಣು ಮುಚ್ಚಿ ಆನೆಗೆ ಪೂಜೆ ಸಲ್ಲಿಸಿದ್ದ. ವ್ಯಕ್ತಿ ಪೂಜೆ ಸಲ್ಲಿಸುತ್ತಿರುವುದನ್ನು ಕಂಡ ಕಾಡಾನೆ ಸ್ವಲ್ಪ ಹಿಂದೆ ಸರಿದು ಕಾಡಿಗೆ ಹೋಗಲು ಯತ್ನಿಸಿದೆ. ಆದರೆ ಆನೆಗೆ ಮುಂದೆ ಹೋಗಲು ಬಿಡದ ವ್ಯಕ್ತಿ ಮತ್ತೆ ಆನೆಯ ಕಾಲಿಗೆ ಬಿದ್ದಿದ್ದ.
ಇದನ್ನು ಕಂಡ ಸುತ್ತಮುತ್ತಲಿನವರು ಜೋರಾಗಿ ಆನೆ ಬಳಿ ಹೋಗಬೇಡ ಎಚ್ಚರಿಕೆ ನೀಡಿದರೂ ಅದ್ಯಾವುದಕ್ಕೂ ಕ್ಯಾರೇ ಅನ್ನದೇ ಆನೆ ಬಳಿ ತೆರಳಿ ಕೈ ಮುಗಿಯುತ್ತಿದ್ದ. ಬಳಿಕ ತನ್ನ ವಾಹನದತ್ತ ಆ ವ್ಯಕ್ತಿ ವಾಪಸ್ ಆಗಿದ್ದ ಈ ದೃಶ್ಯವನ್ನು ಅಲ್ಲೇ ಇದ್ದವರು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದರು. ಈ ಸಂಬಂಧ ಎಚ್ಚೆತ್ತ ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಗೆ ಅಡ್ಡಿಪಡಿಸಿದ ವ್ಯಕ್ತಿಯನ್ನು ಪತ್ತೆ ಹಚ್ಚಿ 10 ಸಾವಿರ ರೂಪಾಯಿ ದಂಡ ವಿಧಿಸಿತ್ತು.
ಇದನ್ನೂ ಓದಿ :Elephant tusk cut: ಕಾಡಾನೆ ಕಾರ್ಯಾಚರಣೆ.. ಕೋಪದಿಂದ ಕ್ರೇನ್ಗೆ ತಿವಿದ ಗಜರಾಜನ ದಂತ ಕಟ್