ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ವಲಯ ವ್ಯಾಪ್ತಿಯಲ್ಲಿ ಸುಮಾರು 20 ಹಸು, ಮೇಕೆಗಳನ್ನು ಬಲಿ ಪಡೆದಿದ್ದ ಹುಲಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.
ಕುಂದುಕೆರೆ ವಲಯ ವ್ಯಾಪ್ತಿಯಲ್ಲಿ 20ಕ್ಕೂ ಅಧಿಕ ಹಸು ಸೇರಿದಂತೆ ಮೇಕೆಗಳನ್ನು ಬಲಿ ಪಡೆದಿದ್ದ ಹುಲಿ ಸೆರೆ ಹಿಡಿಯಲು ಅರಣ್ಯ ಇಲಾಖೆ ಮುಂದಾಗಿತ್ತು. ಆನೆಗಳ ಸಹಾಯದಿಂದ ಹುಲಿ ಪತ್ತೆಗೆ ಅಧಿಕಾರಿಗಳು ಹುಡುಕಾಟ ಆರಂಭಿಸಿದ್ದರು. ಆದರೆ ಹುಲಿ ಪತ್ತೆಯಾಗಿರಲಿಲ್ಲ. ಅಕ್ರಂ ಎಂಬುವವರು ಹುಲಿ ಓಡಾಡಿರುವ ಕುರಿತಂತೆ ಮಾಹಿತಿ ನೀಡಿದ್ದರು.
ಕಾರ್ಯಾಚರಣೆ ಕೈಗೊಂಡಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಕುಂದುಕೆರೆ ವಲಯದ ಪರಮೇಶ್ವರಪ್ಪ ಎಂಬುವವರ ಜಾಮೀನಿನ ಬಳಿ ಹುಲಿಗೆ ಅರವಳಿಕೆ ನೀಡಿ ಸೆರೆ ಹಿಡಿದಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಜಯಪ್ರಕಾಶ, ಪಾರ್ಥ ಸಾರಥಿ ಗಣೇಶ, ರೋಹಿತ ಎಂಬ ಸಾಕಾನೆಗಳನ್ನು ಬಳಸಿಕೊಳ್ಳಲಾಗಿದೆ.
ಕುಂದುಕೆರೆ ವಲಯದ ಚಿರಕನಹಳ್ಳಿ, ಕಡಬೂರು, ಕುಂದುಕೆರೆ, ಮಾಲಾಪುರ, ಬೊಮ್ಮನಹಳ್ಳಿ, ವಡ್ಡಗೆರೆ ಭಾಗದ ಜನರಲ್ಲಿ ಆತಂಕ ಹುಟ್ಟಿಸಿದ್ದ ಹುಲಿ ಸೆರೆಯಾಗಿದ್ದು, ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.