ಚಾಮರಾಜನಗರ: ರಾಷ್ಟ್ರಮಟ್ಟಕ್ಕೆ ಗೊರವರ ಕುಣಿತವನ್ನು ಕೊಂಡೊಯ್ದಿದ್ದ ಹಿರಿಯ ಜಾನಪದ ಕಲಾವಿದ ಪುಟ್ಟಮಲ್ಲೇಗೌಡ (98) ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ರಾಮಸಮುದ್ರದ ತಮ್ಮ ನಿವಾಸದಲ್ಲಿ ನಿನ್ನೆ ಕೊನೆಯುಸಿರೆಳೆದಿದ್ದು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮಂಗಳವಾರ ಅಂತ್ಯಕ್ರಿಯೆ ನಡೆಯಲಿದೆ. ಸ್ಥಳೀಯ ಮಟ್ಟದಿಂದ ರಾಷ್ಟ್ರಮಟ್ಟಕ್ಕೆ ಗೊರವರ ಕುಣಿತವನ್ನು ಕೊಂಡೊಯ್ದಿದ್ದ ಪುಟ್ಟಮಲ್ಲೇಗೌಡರಿಗೆ 1991 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಜಾನಪದಶ್ರೀ, ಜಾನಪದಲೋಕ ಪ್ರಶಸ್ತಿಗಳು ದೊರಕಿದ್ದವು. ಅಲ್ಲದೇ ನಾಡಿನ ವಿವಿಧ ಸಂಘ ಸಂಸ್ಥೆಗಳು ಅವರನ್ನು ಗೌರವಿಸಿದ್ದವು.
ಕಳೆದ ನವೆಂಬರ್ 28 ರಂದು ಈಟಿವಿ ಭಾರತ, 'ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಮನೆಯಿಲ್ಲ' ಎಂಬ ಸುದ್ದಿ ವರದಿ ಮಾಡಿತ್ತು. ಇದರಲ್ಲಿ ಪುಟ್ಟಮಲ್ಲೇಗೌಡರು, ಬೀಳುತ್ತಿದ್ದ ಮಣ್ಣಿನಗೋಡೆ ಬಳಿ ನಿಂತು ಆಶ್ರಯ ಮನೆಯನ್ನು ಸರ್ಕಾರ ನೀಡಬೇಕು, ನನ್ನ ಮನೆಯಲ್ಲೇ ನಾನು ಕೊನೆಯುಸಿರು ಎಳೆಯಬೇಕೆಂದು ಭಾವುಕರಾಗಿ ಹೇಳಿದ್ದರು. ಕೊನೆಗೂ ಸ್ವಂತ ಸೂರಿಲ್ಲದೇ ಪುಟ್ಟಮಲ್ಲೇಗೌಡರು ತಮ್ಮ ಕುಣಿತ ನಿಲ್ಲಿಸಿದ್ದಾರೆ.