ಚಾಮರಾಜನಗರ : ಸಹಸ್ರಾರು ಅಭಿಮಾನಿಗಳ ಮನದಲ್ಲಿ ನೆಲೆಸಿರುವ ಅಪ್ಪು ಇಲ್ಲಿ ಸಿರಿಧಾನ್ಯದಲ್ಲಿ ಅರಳಿ ಸಿರಿವಂತನಾಗಿದ್ದು, ಜೊತೆಗೆ ಜನರ ಆಶೋತ್ತರಗಳಿಗೆ ಸ್ಪಂದಿಸಿದ ಜಯಚಾಮರಾಜೇಂದ್ರ ಒಡೆಯರ್ ಅಪ್ಪು ಜೊತೆ ಮಂದಸ್ಮಿತರಾಗಿದ್ದಾರೆ.
ಈ ದೃಶ್ಯ ಕಂಡು ಬಂದಿದ್ದು ಜಿಲ್ಲೆಯಲ್ಲಿ ದಸರಾದ ಪ್ರಯುಕ್ತ ನಗರದ ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ.ಇಲ್ಲಿನ ನವರಾತ್ರಿ ಸಂಭ್ರಮದಲ್ಲಿ ಪುನೀತ್ ಮತ್ತು ಮಹಾರಾಜ ಜಯಚಾಮರಾಜ ಒಡೆಯರ್ ಆಕರ್ಷಣೆಯ ಕೇಂದ್ರವಾಗಿದ್ದಾರೆ.
ದಸರಾ ಪ್ರಯುಕ್ತ ಸುಮಾರು 13.5 ಲಕ್ಷ ರೂ ಅನುದಾನದಲ್ಲಿ 27ಕ್ಕೂ ಹೆಚ್ಚು ಮಳಿಗೆಗಳ ಮೂಲಕ ಫಲಪುಷ್ಪ ಪ್ರದರ್ಶನ ಆಯೋಜಿಸಿದ್ದು ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ತಂಡೋಪತಂಡವಾಗಿ ಆಗಮಿಸಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಸೈಕಲ್, ಮ್ಯಾಂಗೋ ಸೇರಿದಂತೆ ವಿನೂತನವಾಗಿ ಮಾಡಿರುವ ಸೆಲ್ಫಿ ಪಾಯಿಂಟ್ ಗಳಲ್ಲಿ ಜನರನ್ನು ವಿಭಿನ್ನ ಸೆಲ್ಫಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ಕಲ್ಲಂಗಡಿ ಅರಳಿದ ಕಲಾಕೃತಿ.. ಹೂವುಗಳಲ್ಲಿ ಬಿಳಿಗಿರಿ ಬನ : ಸಿರಿಧಾನ್ಯದಲ್ಲಿ ಪುನೀತ್, ಜಯಚಾಮರಾಜ ಒಡೆಯರ್ ನಿರ್ಮಿಸಿರುವುದು ಒಂದೆಡೆಯಾದರೇ ಮತ್ತೊಂದೆಡೆ ಕಲ್ಲಂಗಡಿಗಳಲ್ಲಿ ಜನಪ್ರಿಯ ವ್ಯಕ್ತಿಗಳ ಚಿತ್ರಗಳು ಅರಳಿ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ. ಡಾ.ರಾಜ್ ಕುಮಾರ್, ಪಾರ್ವತಮ್ಮ ರಾಜ್ ಕುಮಾರ್, ಪುನೀತ್, ಮಹಾತ್ಮ ಗಾಂಧಿ, ಡಾ. ಬಿ.ಆರ್.ಅಂಬೇಡ್ಕರ್, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ವಿಷ್ಣುವರ್ಧನ್, ಶಂಕರ್ ನಾಗ್ ಮತ್ತು ದರ್ಶನ್ ಚಿತ್ರಗಳು ಕಲ್ಲಂಗಡಿಯಲ್ಲಿ ಕಂಗೊಳಿಸುತ್ತಿವೆ.
ಇನ್ನು, ಚಾಮರಾಜನಗರ ಜನರ ಆರಾಧ್ಯ ದೈವ, ಹಸಿರಿನ ಐಸಿರಿಯಲ್ಲಿ ನೆಲೆಸಿರುವ ಬಿಳಿಗಿರಿರಂಗನಾಥ ದೇವಾಲಯ ಹೂವುಗಳಲ್ಲಿ ಅರಳಿದ್ದು ಭಕ್ತಿಭಾವವನ್ನು ಇಮ್ಮಡಿಗೊಳಿಸುವಂತಿದೆ.
ಕಿಚನ್ ಗಾರ್ಡನ್, ಟೆರೇಸ್ ಗಾರ್ಡನ್ ಜೊತೆಗೆ ವಿವಿಧ ಖಾದ್ಯಗಳ ಹಬ್ಬ : ಈ ಬಾರಿ ಫಲಪುಷ್ಪ ಪ್ರದರ್ಶನದಲ್ಲಿ ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ, ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಹೆಚ್ಚಿನ ಒಲವು ತೋರಲಾಗಿದೆ. ಪ್ರಗತಿಪರ ಕೃಷಿಕರು ಬೆಳೆದಿರುವ ವಿವಿಧ ಬೆಳೆಗಳ ಪ್ರದರ್ಶನ, ಮನೆಯ ಚಿಕ್ಕ ಖಾಲಿ ಜಾಗದಲ್ಲೂ ಗಾರ್ಡನ್ ಮಾಡುವ ಉಪಾಯಗಳು, ಟೆರೇಸ್ ಗಾರ್ಡನ್ ಉಪಯೋಗಗಳ ಬಗ್ಗೆ ಪ್ರತಿಕೃತಿ ಮೂಲಕ ತೋರಿಸಿ ಕೊಡಲಾಗಿದೆ.
ಫಲಪುಷ್ಪ ಪ್ರದರ್ಶನದಲ್ಲಿ ಖಾದ್ಯಪ್ರಿಯರಿಗೆ ಹಬ್ಬವಾಗಿದ್ದು, ವಿವಿಧ ಜ್ಯೂಸ್ ಗಳು, ಸಾವಯವ ತಿನಿಸುಗಳು, ಮಹಿಳಾ ಸ್ವಸಹಾಯ ಸಂಘಗಳು ತಯಾರಿಸಿರುವ ಆಹಾರ ಪದಾರ್ಥಗಳು ಮನಸೆಳೆದವು. ಚಾಮರಾಜನಗರದ ದಸರಾ ವೈಭವ ಕಣ್ತುಂಬಿಕೊಳ್ಳಲು ಜನರು ಆಗಮಿಸುತ್ತಿದ್ದು, ಫಲಪುಷ್ಪ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ.
ಇದನ್ನೂ ಓದಿ : 'ಅಪ್ಪುದಿನ' ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದ ಅಶ್ವಿನಿ ಪುನೀತ್ ರಾಜ್ಕುಮಾರ್ ಭಾವುಕ