ಚಾಮರಾಜನಗರ: ಕಳೆದ ಒಂದು ವಾರದ ಅವಧಿಯಲ್ಲಿ ಜಿಲ್ಲೆಯ ಒಂದು ಭಾಗದಲ್ಲಿ ಅತಿವೃಷ್ಟಿ ಸಂಭವಿಸಿದರೇ ಮತ್ತೊಂದು ಭಾಗದಲ್ಲಿ ಅನಾವೃಷ್ಟಿ ರೀತಿ ಕೆರೆಗಳು ಖಾಲಿ ಬಿದ್ದಿವೆ. ಜಿಲ್ಲಾದ್ಯಂತ ಆ.25ರಿಂದ ಸೆ.1ರವರೆಗೆ ಸುರಿದ ಮಳೆಗೆ ಯಳಂದೂರು, ಚಾಮರಾಜನಗರ ಹಾಗೂ ಕೊಳ್ಳೇಗಾಲ ತಾಲೂಕುಗಳ 47 ಗ್ರಾಮಗಳು ನಲುಗಿವೆ.
ಆ.25ರಿಂದ ಸೆ.1ರ ನಡುವಿನ ಅವಧಿಯಲ್ಲಿ ಜಿಲ್ಲೆಯಲ್ಲಿ 1.9 ಸೆಂ.ಮೀ ವಾಡಿಕೆ ಮಳೆಯಾಗಿದ್ದು, ಈ ವರ್ಷ11.4 ಸೆಂ.ಮೀ.ನಷ್ಟು ಮಳೆ ಬಿದ್ದಿದೆ. ಏಳು ದಿನಗಳ ಅವಧಿಯಲ್ಲಿ ಮಳೆಗೆ ಜಿಲ್ಲೆಯಾದ್ಯಂತ 346 ಮನೆಗಳು ಭಾಗಶಃ ಹಾನಿಗೀಡಾಗಿದ್ದು, ಐದು ಮನೆಗಳು ಸಂಪೂರ್ಣ ಕುಸಿದಿವೆ.
ಮಳೆಗೆ ಜಿಲ್ಲಾದ್ಯಂತ 1,731 ಹೆಕ್ಟೇರ್ ಪ್ರದೇಶದ ಬೆಳೆಗಳು ಜಲಾವೃತವಾಗಿದ್ದು, 350 ಹೆಕ್ಟೇರ್ ಪ್ರದೇಶದ ತೋಟಗಾರಿಕಾ ಬೆಳೆಗಳು ಜಲಾವೃತವಾಗಿವೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ. 35 ಅಂಗನವಾಡಿ ಕಟ್ಟಡಗಳು, 77 ಶಾಲೆಗಳು, 11 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಲೋಕೋಪಯೋಗಿ ಇಲಾಖೆಗೆ ಸೇರಿದ ಆರು ಕಟ್ಟಡಗಳು ಭಾಗಶಃ ಹಾನಿಗೀಡಾಗಿವೆ.
19 ಕೆರೆಗಳು ಖಾಲಿಖಾಲಿ: ಜಿಲ್ಲೆಯಲ್ಲಿ ಬಾರಿ ಮಳೆಯಾಗಿದ್ದರೂ ಕೂಡ ಜಿಲ್ಲೆಯ 19 ಕೆರೆಗಳು ಒಣಗಿವೆ ಎಂದು ಸಣ್ಣ ನೀರಾವರಿ ಇಲಾಖೆಯು ಮಾಹಿತಿ ನೀಡಿದೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಡುವ ಜಿಲ್ಲೆಯ 64 ಕೆರೆಗಳಲ್ಲಿ 27 ಕೆರೆಗಳು ಪೂರ್ಣವಾಗಿ ತುಂಬಿವೆ. 19 ಕೆರೆಗಳು ಹನಿ ನೀರಿಲ್ಲದೇ ಒಣಗಿವೆ. ಗುಂಡ್ಲುಪೇಟೆ ತಾಲೂಕಿನಲ್ಲೇ 11 , ಚಾಮರಾಜನಗರ, ಯಳಂದೂರು ತಲಾ 1 ಮತ್ತು ಹನೂರು ತಾಲೂಕಿನ 6 ಕೆರೆಗಳು ಖಾಲಿಯಾಗಿವೆ ಎಂದು ನೀರಾವರಿ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: ಮಲೆಮಹದೇಶ್ವರ ಬೆಟ್ಟದಲ್ಲಿ ಭಾರೀ ವಾಹನಗಳಿಗೆ ನಿರ್ಬಂಧ : ತಮಿಳುನಾಡಿಗೆ ಇದ್ದ ಕಳ್ಳಮಾರ್ಗ ಬಂದ್