ಚಾಮರಾಜನಗರ: ನಾಡಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಹನೂರು ತಾಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ಹುಂಡಿ ಹಣ ಎಣಿಕೆ ನಡೆದಿದೆ. ಕಳೆದ 33 ದಿನಗಳಲ್ಲಿ 2.90 ಕೋಟಿ ರೂ. ಸಂಗ್ರಹವಾಗಿದೆ.
ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಬುಧವಾರ ಬೆಳಗ್ಗೆ 8 ಗಂಟೆಗೆ ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ರಾತ್ರಿ 10 ರವರೆಗೂ ಎಣಿಕೆ ನಡೆಯಿತು. ಉಚಿತ ಬಸ್ ಪ್ರಯಾಣ ಹಾಗೂ ಹುಣ್ಣಿಮೆ, ಅಮಾವಾಸ್ಯೆ, ಕ್ರಿಸ್ಮಸ್ ರಜೆ, ಹೊಸ ವರ್ಷದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಹರಕೆಯ ರೂಪದಲ್ಲಿ ಕೋಟ್ಯಂತರ ಹಣ, ಚಿನ್ನ ಹಾಗೂ ಬೆಳ್ಳಿಯನ್ನು ಹುಂಡಿಗೆ ಹಾಕಿದ್ದಾರೆ.
33 ದಿನಗಳ ಅವಧಿಯಲ್ಲಿ ನಡೆದ ಹುಂಡಿಗಳ ಎಣಿಕೆಯಲ್ಲಿ 2,90,00,732 ರೂ. ಸಂಗ್ರಹವಾಗಿದೆ. 102 ಗ್ರಾಂ ಚಿನ್ನ ಮತ್ತು 3.300 ಕೆಜಿ
ಬೆಳ್ಳಿ ಜೊತೆಗೆ ಅಮೆರಿಕದ 22 ಡಾಲರ್, ಕೆನಡಾದ 100, ಥಾಯ್ಲೆಂಡ್ನ 2 ಡಾಲರ್ ವಿದೇಶಿ ನೋಟುಗಳು, ಚಲಾವಣೆಯಲ್ಲಿ ಇಲ್ಲದ 2000 ರೂ. ಮುಖಬೆಲೆಯ 12 ನೋಟುಗಳು ಹುಂಡಿಯಲ್ಲಿ ಸಿಕ್ಕಿವೆ.
ಇದನ್ನೂ ಓದಿ: ಮಾದಪ್ಪನ ಹುಂಡಿಯಲ್ಲಿ ₹28 ಲಕ್ಷ ಮೌಲ್ಯದ ಅಮಾನ್ಯ ನೋಟುಗಳು ಪತ್ತೆ
ಇದಕ್ಕೂ ಮುನ್ನ ಸೆಪ್ಟೆಂಬರ್ ತಿಂಗಳಲ್ಲಿ ಹುಂಡಿ ಎಣಿಕೆ ನಡೆದಾಗ 2.38 ಕೋಟಿ ರೂ. ಸಂಗ್ರಹವಾಗಿತ್ತು. ಬಳಿಕ ಅಕ್ಟೋಬರ್ ತಿಂಗಳಲ್ಲಿ ನಡೆದ ಹುಂಡಿ ಎಣಿಕೆ ವೇಳೆ ಅಮಾನ್ಯಗೊಂಡ ಲಕ್ಷಾಂತರ ರೂಪಾಯಿ ಮೌಲ್ಯದ ನೋಟುಗಳು ಇದ್ದವು. ಅಮಾನ್ಯಗೊಂಡ 1,000 ರೂ. ಮುಖಬೆಲೆಯ ನೋಟುಗಳು 677 (ಇದರ ಮೌಲ್ಯ 6,77,000 ರೂ.), ಹಾಗೆಯೇ 500 ರೂ. ಮುಖಬೆಲೆಯ ನೋಟುಗಳು 4,353 ( 21,76,500 ರೂ.) ಇದ್ದು, ಒಟ್ಟು 28,53,500 ಲಕ್ಷ ಹಣವನ್ನು ಭಕ್ತರು ಹುಂಡಿಯಲ್ಲಿ ಹಾಕಿದ್ದರು. 2,000 ರೂ. ಮುಖಬೆಲೆಯ ನೋಟುಗಳು 3.56 ಲಕ್ಷದಷ್ಟು ಸಂಗ್ರಹವಾಗಿದ್ದು, ಈ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದಾಗಿದೆ. ಆದರೆ, 28 ಲಕ್ಷ ಹಣ ಹುಂಡಿ ಸೇರಿದರೂ ಪ್ರಾಧಿಕಾರಕ್ಕೆ ಪ್ರಯೋಜನಕ್ಕೆ ಬಾರದಂತಾಗಿದೆ. ಈ ವರ್ಷ ಒಟ್ಟು 50 ಲಕ್ಷ ಭಕ್ತರು ಆಗಮಿಸಿದ್ದು, ಹುಂಡಿ, ಉತ್ಸವ, ಲಡ್ಡು ಮಾರಾಟದಿಂದ ಒಟ್ಟು 63 ಕೋಟಿ ಆದಾಯ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.