ಕೊಳ್ಳೇಗಾಲ: ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಹನೂರು ತಾಲೂಕಿನ ಸೂಳೇರಿಪಾಳ್ಯದಲ್ಲಿ ನಡೆದಿದೆ.
ಸೂಳೇರಿಪಾಳ್ಯ ಪಂಚಾಯಿತಿ ವ್ಯಾಪ್ತಿಯ ಕಾಂಚಳ್ಳಿ ಗ್ರಾಮದಿಂದ ಬೆಂಗಳೂರಿಗೆ ಹೊರಟಿದ್ದ ಕಾರಿಗೆ ಬೆಂಕಿ ತಗುಲಿದ್ದು, ಕ್ಷಣಾರ್ಧದಲ್ಲಿ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಕಾರು ಕಾಂಚಳ್ಳಿ ಗ್ರಾಮದ ರಾಜು ಎಂಬವರಿಗೆ ಸೇರಿದ್ದಾಗಿದೆ. ಇನ್ನು ಚಾಲಕ ವೆಂಕಟರಾಜು, ಶ್ರೀನಿವಾಸ್ ಮತ್ತು ರಘು ಎಂಬುವವರು ಕಾರ್ಯನಿಮಿತ್ತ ಬೆಂಗಳೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದು, ಎಚ್ಚೆತ್ತ ಚಾಲಕ ಕಾರನ್ನು ನಿಲ್ಲಿಸಿದ್ದಾನೆ. ಕೂಡಲೇ ಎಲ್ಲರೂ ಕಾರಿಂದಿಳಿದು ಬಚಾವಾಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ್ದಾರೆ.