ಚಾಮರಾಜನಗರ: ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಅನುಮತಿ ಪಡೆಯದೇ ಜಾಹೀರಾತು, ಪಕ್ಷದ ಚಿಹ್ನೆಯೊಟ್ಟಿಗೆ ಮತದಾರರ ಪಟ್ಟಿಯನ್ನು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದ್ದ ಇಬ್ಬರು ಅಭ್ಯರ್ಥಿಗಳ ವಿರುದ್ಧ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಜೆಪಿ ಅಭ್ಯರ್ಥಿ ಮೈ.ವಿ. ರವಿಶಂಕರ್ ಹಾಗೂ ಜೆಡಿಎಸ್ ಅಭ್ಯರ್ಥಿ ಹೆಚ್.ಕೆ. ರಾಮು ವಿರುದ್ಧ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಭೀಮಸೇನ್ ಗುಡೂರ್ ದೂರು ನೀಡಿದ ಹಿನ್ನೆಲೆಯಲ್ಲಿ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಐಪಿಸಿ 171(ಸಿ) ಅಡಿ ಪ್ರಕರಣ ದಾಖಲಾಗಿದೆ.
ಮೀಡಿಯಾ ಸರ್ಟಿಫಿಕೇಷನ್ ಹಾಗೂ ಮಾನಿಟರಿಂಗ್ ಕಮಿಟಿಯಿಂದ ಯಾವುದೇ ಅನುಮತಿ ಪಡೆಯದೇ ಪಕ್ಷದ ಚಿಹ್ನೆಯಡಿ ಮತದಾರರ ಪಟ್ಟಿ ಅಪ್ಲೋಡ್ ಮಾಡಿದ್ದು ಹಾಗೂ ಜಾಹೀರಾತು ನೀಡಿದ್ದರಿಂದ ಈ ಪ್ರಕರಣ ದಾಖಲಾಗಿದೆ.
2013ಕ್ಕೂ ಮುನ್ನ ಯಾವುದೇ ಅನುಮತಿ ಬೇಕಿರಲಿಲ್ಲ. ಆದರೆ ನೀತಿ-ನಿಯಮ 2014ರಲ್ಲಿ ಬದಲಾಗಿದ್ದು, ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಮೈಸೂರಿನ ಸರಸ್ವತಿಪುರಂ ಠಾಣೆಯಲ್ಲಿ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಭೀಮಸೇನ್ ತಿಳಿಸಿದ್ದಾರೆ.
ಇದನ್ನೂ ಓದಿ: ಹೊರಟ್ಟಿ ಈ ಹಿಂದೆ ಸೋಲುವ ಪಕ್ಷದಲ್ಲಿದ್ದರೂ ಗೆಲ್ಲುತ್ತಿದ್ದರು: ಮುಖ್ಯಮಂತ್ರಿ ಬೊಮ್ಮಾಯಿ