ಚಾಮರಾಜನಗರ: ಕರ್ನಾಟಕದ ಯಾತ್ರಸ್ಥಳಗಳಲ್ಲಿ ಒಂದಾದ ಮಲೆ ಮಹದೇಶ್ವರ ಬೆಟ್ಟಕ್ಕೆ 2023 ರಲ್ಲಿ 50 ಲಕ್ಷಕ್ಕೂ ಅಧಿಕ ಮಂದಿ ಭಕ್ತರು ಭೇಟಿ ಕೊಟ್ಟಿದ್ದು, ಕೋಟ್ಯಂತರ ರೂಪಾಯಿ ಆದಾಯ ಹರಿದು ಬಂದಿದೆ.
2023 ಅಂತ್ಯಕ್ಕೆ ಬಂದಿರುವ ಹೊತ್ತಿನಲ್ಲಿ ಈ ವರ್ಷದ ಆದಾಯದ ಲೆಕ್ಕವನ್ನು ಪ್ರಾಧಿಕಾರವು ನೀಡಿದ್ದು, ಜನವರಿಯಿಂದ ಡಿಸೆಂಬರ್ ತನಕ ನಡೆದ ಒಟ್ಟು ಹುಂಡಿ ಎಣಿಕೆಯಲ್ಲಿ 26,18, 28,295 ರೂ. ಸಂಗ್ರಹವಾಗಿದ್ದು, 798 ಗ್ರಾಂ ಚಿನ್ನ, 27 ಕೆಜಿ ಬೆಳ್ಳಿ ಕಾಣಿಕೆ ರೂಪದಲ್ಲಿ ಭಕ್ತರು ಈ ವರ್ಷ ಮಾದಪ್ಪನಿಗೆ ಸಲ್ಲಿಸಿದ್ದಾರೆ.
ಕ್ಷೇತ್ರದಲ್ಲಿ ಜನಪ್ರಿಯ ಉತ್ಸವಗಳಲ್ಲಿ ಒಂದಾದ ಚಿನ್ನದ ರಥೋತ್ಸವ ಮೂಲಕ 16,27,74,240 ರೂ. ಬಂದಿದ್ದು ಬೆಳ್ಳಿ ರಥೋತ್ಸವದ ಮೂಲಕ 6 ತಿಂಗಳಲ್ಲಿ 14 ಲಕ್ಷ ಬಂದಿದೆ, ಲಾಡು ಮಾರಾಟದಿಂದಲೇ 15 ಕೋಟಿ ಆದಾಯ ಕ್ಷೇತ್ರಕ್ಕೆ ಹರಿದು ಬಂದಿರುವುದು ಬೆಟ್ಟಕ್ಕೆ ಈ ವರ್ಷಕ್ಕೆ ಹರಿದು ಬಂದಿರುವ ಭಕ್ತ ಸಾಗರಕ್ಕೆ ಸಾಕ್ಷಿಯಾಗಿದೆ.
ಬೆಟ್ಟಕ್ಕೆ 50 ಲಕ್ಷಕ್ಕೂ ಅಧಿಕ ಮಂದಿ ಭೇಟಿ: ಮಲೆ ಮಹದೇಶ್ವರ ಬೆಟ್ಟಕ್ಕೆ 2023ರಲ್ಲಿ 50 ಲಕ್ಷಕ್ಕೂ ಅಧಿಕ ಮಂದಿ ಭಕ್ತರು ಭೇಟಿ ಕೊಟ್ಟಿದ್ದಾರೆ ಎಂದು ಪ್ರಾಧಿಕಾರ ಅಂದಾಜಿಸಿದೆ. ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್ ತಿಂಗಳುಗಳಲ್ಲಿ 8-9 ಲಕ್ಷದಷ್ಟು ಮಂದಿ ಭಕ್ತರು ಭೇಟಿ ಕೊಟ್ಟಿದ್ದು ಶಕ್ತಿ ಯೋಜನೆಯ ಪಾತ್ರವು ಇದರಲ್ಲಿದೆ. ಇನ್ನೂ ಹುಂಡಿ ಎಣಿಕೆ, ಉತ್ಸವ, ಲಾಡು ಮಾರಾಟದಿಂದ ಪ್ರಾಧಿಕಾರಕ್ಕೆ ಒಟ್ಟು 63,38,02,804 ರೂ. ಆದಾಯ ಬಂದಿದ್ದು ಮಲೆ ಮಾದಪ್ಪ ವರ್ಷದಿಂದ ವರ್ಷಕ್ಕೆ ಶ್ರೀಮಂತನಾಗುತ್ತಿದ್ದಾನೆ.
ಇದನ್ನೂ ಓದಿ: ವೈಕುಂಠ ಏಕಾದಶಿ: ಶರವಣ ಚಾರಿಟಬಲ್ ಟ್ರಸ್ಟ್‌ನಿಂದ 1 ಲಕ್ಷ ಲಡ್ಡು ವಿತರಣೆ
36 ದಿನಕ್ಕೆ ಹುಂಡಿಯಲ್ಲಿ 2.38 ಕೋಟಿ ರೂ. ಸಂಗ್ರಹ: ಸೆಪ್ಟೆಂಬರ್ ತಿಂಗಳಲ್ಲಿ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸರಿಸುಮಾರು 12 ಗಂಟೆಗಳ ಕಾಲ ಹುಂಡಿ ಎಣಿಕೆ ಕಾರ್ಯ ನಡೆಸಲಾಗಿತ್ತು. 36 ದಿನಕ್ಕೆ ಹುಂಡಿಯಲ್ಲಿ 2,38,43,177 ರೂ. ನಗದು ಸಂಗ್ರಹವಾಗಿತ್ತು. ಭಕ್ತರು 63 ಗ್ರಾಂ ಚಿನ್ನ ಹಾಗೂ 3.173 ಕೆಜಿ ಬೆಳ್ಳಿಯನ್ನು ದೇವರಿಗೆ ಕಾಣಿಕೆ ರೂಪದಲ್ಲಿ ಅರ್ಪಿಸಿದ್ದರು. ಇದಕ್ಕೂ ಮುನ್ನ ಏಪ್ರಿಲ್ನಲ್ಲಿ ಹುಂಡಿ ಎಣಿಕೆ ನಡೆಸಲಾಗಿತ್ತು ಆಗ 30 ದಿನದ ಅವಧಿಯಲ್ಲಿ ಒಟ್ಟು 2.28,48,500 ರೂ. ಸಂಗ್ರಹವಾಗಿತ್ತು.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ದೇವಾಲಯಕ್ಕೆ ಭೇಟಿ ನಿಡುತ್ತಿದ್ದಾರೆ.