ಗುಂಡ್ಲುಪೇಟೆ : ಕೊರೊನಾ ಆತಂಕದ ನಡುವೆಯೂ ವರ ಮಹಾಲಕ್ಷ್ಮಿ ಹಬ್ಬಕ್ಕೆ ಖರೀದಿ ಜೋರಾಗಿದ್ದು, ಪಟ್ಟಣದ ಮಾರುಕಟ್ಟೆ ಅಂಗಡಿಗಳ ಮುಂದೆ ಜನ ಜಂಗುಳಿ ಕಂಡು ಬಂತು.
ಶುಕ್ರವಾರ ವರ ಮಹಾಲಕ್ಷ್ಮಿ ಇರುವುದರಿಂದ ಗುರುವಾರ ಬೆಳಗ್ಗೆಯಿಂದಲೇ ಹಣ್ಣು- ಹಂಪಲು, ಪೂಜಾ ಸಾಮಗ್ರಿ ಮತ್ತು ತರಕಾರಿ ಖರೀದಿಗೆ ಜನ ಮುಗಿಬಿದ್ದಿದ್ದರು. ಎಂದಿಗಿಂತ ಸಾಮಗ್ರಿಗಳ ಬೆಲೆ ಜಾಸ್ತಿಯಿದ್ದರೂ, ಗ್ರಾಹಕರ ಸಂಖ್ಯೆಯಲ್ಲಿ ಏನೂ ಕೊರತೆಯಾಗಿಲ್ಲ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಇಷ್ಟು ದಿನ ಲಾಕ್ ಡೌನ್, ಕೊರೊನಾ ಭೀತಿ ಹಿನ್ನೆಲೆ ಜನ ಮನೆಯಿಂದ ಹೊರ ಬಾರದೆ, ಖಾಲಿ ಹೊಡೆಯುತ್ತಿದ್ದ ಮಾರುಕಟ್ಟೆಗಳು, ವಾಹನ ಸಂಚಾರ ವಿರಳವಾಗಿದ್ದ ರಸ್ತೆಗಳು ಇಂದು ಜನರಿಂದ ತುಂಬಿದ್ದ ದೃಶ್ಯ ಕಂಡು ಬಂತು.
ಖರೀದಿ ಭರದಲ್ಲಿ ಮಾಸ್ಕ್, ಅಂತರ ಮರೆತ ಜನ: ಹಬ್ಬದ ಖರೀದಿ ಭರದಲ್ಲಿ ಜನ ಕೊರೊನಾ ಮಾರ್ಗಸೂಚಿಗಳನ್ನು ಗಾಳಿ ತೂರಿದ್ದರು. ಹೆಚ್ಚಿನ ಜನರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದೆ ಬೇಕಾಬಿಟ್ಟಿ ಓಡಾಡುತ್ತಿರುವುದು ಕಂಡು ಬಂತು.