ಚಾಮರಾಜನಗರ: ದುಡ್ಡಿನಾಸೆಗಾಗಿ ಶಿಶುವನ್ನು ಮಾರಾಟ ಮಾಡಿರುವ ಕಳವಳಕಾರಿ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ದುಡಿದು ತನ್ನ ಮಗುವನ್ನು ಸಾಕಿ ಸಲಹಬೇಕಿದ್ದ ತಂದೆಯೇ ಹಣದಾಸೆಗೆ ಮಾರಿದ್ದು, ಈಗ ಹೆತ್ತ ಕಂದನಿಗಾಗಿ ತಾಯಿ ರೋಧಿಸುತ್ತಿರುವುದು ಮನಕಲಕುವಂತಿದೆ.
ಚಾಮರಾಜನಗರದ ಕೋರ್ಟ್ ರಸ್ತೆ ಬಡಾವಣೆಯಲ್ಲಿ ವಾಸವಿರುವ ಹೋಟೆಲ್ ಕಾರ್ಮಿಕ ಬಸಪ್ಪ(35) ನಾಗವೇಣಿ ದಂಪತಿಗೆ 7 ವರ್ಷದ ಗಂಡು ಮಗು ಇದೆ. 25 ದಿನಗಳ ಹಿಂದಷ್ಟೇ ಎರಡನೇ ಹೆರಿಗೆಯಲ್ಲಿ ಮತ್ತೊಂದು ಗಂಡು ಮಗು ಜನಿಸಿತ್ತು. ಆ ಮಗುವನ್ನು ಬಸಪ್ಪ ಗಾಳೀಪುರದ ವ್ಯಕ್ತಿಯೊಬ್ಬನಿಗೆ 50 ಸಾವಿರ ರೂ.ಗೆ 6 ದಿನಗಳ ಹಿಂದೆ ಮಾರಾಟ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಹೆಂಡತಿ ಗೋಳಾಟ: ಗಂಡ ನೀಡುತ್ತಿದ್ದ ಹಿಂಸೆ ತಾಳಲಾರದೇ ಮಗು ಕೊಟ್ಟು ಈಗ ಅದನ್ನು ವಾಪಸ್ ಕೊಡಿಸಿ ಎಂದು ನಾಗವೇಣಿ ಕಣ್ಣೀರಿಡುತ್ತಿದ್ದಾಳೆ. ನಾಗವೇಣಿಗೆ ಹೃದಯ ಸಂಬಂಧಿ ಕಾಯಿಲೆ ಇದೆ. ತನಗೆ ಸಾಲದ ಹೊರೆ ಇದೆ. ಆದ್ದರಿಂದ ಮಗು ಮಾರಾಟ ಮಾಡೋಣ ಎಂದು ಪತಿ ಬಸಪ್ಪ ಪತ್ನಿಯನ್ನು ಒತ್ತಾಯಿಸಿ ಕೊನೆಗೆ ಹಿಂಸೆ ಕೊಟ್ಟಿದ್ದಾನೆ. ಹಿಂಸೆಗೂ ಬಗ್ಗದಿದ್ದಾಗ, ತಾನು ಮನೆ ಬಿಟ್ಟು ಹೋಗುತ್ತೇನೆ ಎಂದು ಪತಿ ವರಾತ ತೆಗೆದು ಮಗು ಮಾರಾಟ ಮಾಡಿದ್ದಾರೆ.
ತಂದೆ - ತಾಯಿ ಇಲ್ಲದ ಅನಾಥೆಯಾದ ನನಗೆ ನನ್ನ ಮೊದಲನೇ ಮಗನಿಗೆ ದಿಕ್ಕಿಲ್ಲದಂತಾಗುತ್ತದೆ ಎಂದು ಭಯದಿಂದ ಬಲವಂತದಿಂದ ಮಗು ಕೊಟ್ಟುಬಿಟ್ಟಿದ್ದೇನೆ. ಹೆರಿಗೆಯಾದ ಬಳಿಕ ಆಸ್ಪತ್ರೆಯಿಂದ ಮನೆಗೆ ಬಂದ ಕೆಲವೇ ದಿನಗಳಲ್ಲಿ ಗಾಳೀಪುರದ ವ್ಯಕ್ತಿಯೊಬ್ಬರು ಬಂದು ಮೊಬೈಲ್‌ನಲ್ಲಿ ಮಗುವಿನ ಫೋಟೋ ತೆಗೆದುಕೊಂಡು ಹೋಗಿದ್ದರು.
ನಾಲ್ಕೆದು ದಿನಗಳ ನಂತರ ನಮ್ಮನ್ನು ಗಾಳೀಪುರದ ಮನೆಯೊಂದಕ್ಕೆ ಕರೆಸಿಕೊಂಡು ನನ್ನ ಮಗುವನ್ನು ಬೇರೆಯವರಿಗೆ ಕೊಡಿಸಿದರು. ನಮ್ಮಿಂದ ಬಿಳಿ ಹಾಳೆಗೆ ಸಹಿ ಹಾಕಿಸಿಕೊಂಡರು. ನನ್ನ ಗಂಡನಿಗೆ 50 ಸಾವಿರ ರೂ. ಕೊಟ್ಟರು ಎಂದು ಮಗು ಮಾರಾಟವಾಗಿರುವ ಬಗ್ಗೆ ನಾಗವೇಣಿ ಮಗು ಮಾರಾಟ ಪ್ರಕರಣ ಬಿಚ್ಚಿಟ್ಟರು.
ಮಗು ಕೊಟ್ಟ ಮೇಲೆ ಕೊರಗಿ ಅಳಲಾರಂಭಿಸಿದೆ. ನನ್ನೆದೆಯಲ್ಲಿ ಹಾಲು ಜಿನುಗುತ್ತಿತ್ತು. ನನ್ನ ಪತಿ ಬಳಿ ಮಗು ವಾಪಸ್ ಕೊಡಿಸಿ ಎಂದು ಕೇಳಿಕೊಂಡಿದ್ದಕ್ಕೆ ನನ್ನ ಮೇಲೆ ಹಲ್ಲೆ ನಡೆಯಿತು. ಅಸ್ವಸ್ಥಗೊಂಡಾಗ ಆಸ್ಪತ್ರೆಗೆ ತೋರಿಸಿ ಮಗುವಿನ ವಿಚಾರ ಎತ್ತಕೂಡದು ಎಂದು ಕಟ್ಟಪ್ಪಣೆ ಮಾಡಲಾಯಿತು ಎಂದು ಅಳಲು ತೋಡಿಕೊಂಡರು.
ಗಂಡನ ಮಾತೇನು: ತಾನು ಮಾಡಿದ್ದು ತಪ್ಪು. ಆದರೆ, ಕಷ್ಟ ಇತ್ತು. ಸಾಕಲಾಗದ ಸಂಕಟಕ್ಕೆ ಮಗು ಕೊಟ್ಟುಬಿಟ್ಟಿದ್ದೇನೆ. ಮಾರಾಟ ಮಾಡಿಲ್ಲ. ಮಗು ನೀಡಿದ್ದಕ್ಕೆ ಪತ್ನಿ ಚಿಕಿತ್ಸೆಗಾಗಿ ಹಣ ಕೊಟ್ಟಿದ್ದಾರೆ. ಕಾನೂನಿನ ಪ್ರಕಾರ ಏನೇ ಶಿಕ್ಷೆ ಕೊಟ್ಟರೂ ಅನುಭವಿಸುತ್ತೇನೆ. ನನ್ನ ಮಗು ವಾಪಸ್ ಕೊಟ್ಟರೇ ಸಾಕು ಎಂದು ಪಶ್ಚಾತ್ತಾಪದ ಮಾತುಗಳನ್ನಾಡಿದ್ದಾರೆ.
ಪ್ರಕರಣ ಬಯಲಿಗೆಳೆದ ಲಿಂಗತ್ವ ಅಲ್ಪಸಂಖ್ಯಾತೆ: ಲಿಂಗತ್ವ ಅಲ್ಪಸಂಖ್ಯಾತೆ ಮತ್ತು ಸಂಶೋಧನಾ ವಿದ್ಯಾರ್ಥಿಯಾಗಿರುವ ದೀಪು ಬುದ್ಧೆ ಮೂಲಕ ಈ ಮಗು ಮಾರಾಟ ಪ್ರಕರಣ ಬೆಳಕಿಗೆ ಬಂದಿದೆ. ನೆರೆ ಹಾವಳಿಯಿಂದ ಲೈಂಗಿಕ ಅಲ್ಪಸಂಖ್ಯಾತರ ಜೀವನ ಸ್ಥಿತಿಗತಿ ಅರಿಯಲು ಮನೆಗಳಿಗೆ ಭೇಟಿ ನೀಡಿದ ಹೊತ್ತಲ್ಲಿ ಈ ಮಗು ಮಾರಾಟ ಪ್ರಕರಣ ಬೆಳಕಿಗೆ ಬಂದು ಮಕ್ಕಳ ಕಲ್ಯಾಣ ಸಮಿತಿಗೆ ವಿಚಾರ ಮುಟ್ಟಿಸಿದ್ದಾರೆ.
ಲೈಂಗಿಕ ಅಲ್ಪಸಂಖ್ಯಾತೆ ದೀಪು ಬುದ್ಧೆ ಬೇರೆ - ಬೇರೆಯಾದ ತಾಯಿ ಮಗುವನ್ನು ಒಂದು ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಚಾಮರಾಜನಗರ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಓದಿ: ಉತ್ತರಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಆರೋಗ್ಯ ಸಚಿವರಿಂದ ಮಹತ್ವದ ಸಭೆ