ಕೊಳ್ಳೇಗಾಲ: ರೈತ, ಕಾರ್ಮಿಕ ವಿರೋಧಿ ನೀತಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ರೈತ ದಲಿತ ಕಾರ್ಮಿಕ ಐಕ್ಯ ಹೋರಾಟ ಸಮಿತಿಯು ಪಟ್ಟಣದ ಉಪವಿಭಾಗಧಿಕಾರಿ ಕಚೇರಿ ಮುಂಭಾಗ ಉಪವಾಸ ಸತ್ಯಾಗ್ರಹ ನಡೆಸಿತು.
ಮಹಾತ್ಮ ಗಾಂಧೀಜಿ , ಪ್ರೊ.ಎಂ.ಡಿ ನಂಜುಂಡಸ್ವಾಮಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸತ್ಯಾಗ್ರಹ ಚಳವಳಿ ಪ್ರಾರಂಭಿಸಿದ ರೈತರು ಹೋರಾಟದ ಗೀತೆಗಳನ್ನು ಹಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿದರು. ರೈತರ ಬುದುಕು ಕಷ್ಟಕ್ಕೆ ಸಿಲುಕಿದೆ. ರೈತ ಪರವಾಗಿ ನಿಲ್ಲುವಂತೆ ಭರವಸೆ ನೀಡಿ ಬಂಡವಾಳಶಾಹಿಗಳ ಪರವಾಗಿರುವುದು ವಿಪರ್ಯಾಸವಾಗಿದೆ. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ನಾಗರಿಕನ ಜೀವನ, ಆಹಾರವನ್ನ ಕಸಿದುಕೊಳ್ಳುವ ಕಾಯ್ದೆಗಳು ಇವಾಗಿವೆ. ಮಹಾತ್ಮ ಗಾಂಧಿ ಚಳವಳಿ ನಡೆಸಿ ಸ್ವಾತಂತ್ರ್ಯ ತಂದು ಕೊಟ್ಟರೆ, ಪ್ರಧಾನಿ ಮೋದಿಯವರು ದೇಶವನ್ನೇ ಮಾರಾಟ ಮಾಡುತ್ತಿದ್ದಾರೆ. ರೈತರ ವಿರುದ್ದ ನಿಂತ ಯಾವ ಸರ್ಕಾರಗಳು ಹೆಚ್ಚುಕಾಲ ಉಳಿಯುವುದಿಲ್ಲ. ಈಗಲಾದರೂ ಎಚ್ಚೆತ್ತು ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಿರಿ ಎಂದು ಎಚ್ಚರಿಸಿದರು.
ರೈತ ಮುಖಂಡ ಶೈಲೇಂದ್ರ ಮಾತನಾಡಿ, ರೈತರಿಗೆ ಮೋಸ ಮಾಡಿದ ಯಾವ ಸರ್ಕಾರಗಳು ಉಳಿದಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಆಗ್ರಹಿಸುತ್ತಿದ್ದೇವೆ, ಈ ಕಾಯ್ದೆಗಳನ್ನು ಹಿಂಪಡೆದು ರೈತ ಪರವಾಗಿ ನಿಲ್ಲಿ ಇಲ್ಲವಾದಲ್ಲಿ ಸರ್ಕಾರ ಕಿತ್ತೊಗೆಯುವುದು ರೈತರಿಗೆ ತಿಳಿದಿದೆ ಎಂದರು.