ಚಾಮರಾಜನಗರ: ಕಬ್ಬಿಗೆ ಎಫ್ಆರ್ಪಿ ಹಾಗೂ ಎಸ್ಎಪಿ ದರವನ್ನು ವೈಜ್ಞಾನಿಕವಾಗಿ ನಿಗದಿಪಡಿಸಬೇಕೆಂದು ಒತ್ತಾಯಿಸಿ ನಗರದ ಜಿಲ್ಲಾಡಳಿತ ಭವನ ಆವರಣದಲ್ಲಿ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ಪ್ರತಿಭಟಿಸಿದರು.
ಕೇಂದ್ರ ಸರ್ಕಾರ ಅವೈಜ್ಞಾನಿಕವಾಗಿ ನಿಗದಿಪಡಿಸಿರುವ ಎಫ್ಆರ್ಪಿ ದರವನ್ನು ತಿದ್ದುಪಡಿ ಮಾಡಬೇಕು. ರಾಜ್ಯ ಸರ್ಕಾರ ಕೂಡಲೇ ಪ್ರತಿ ಟನ್ಗೆ 3300 ರೂ. ಎಸ್ಎಪಿ ದರ ನಿಗದಿಪಡಿಸಬೇಕು ಎಂದು ಆಗ್ರಹಿಸಿ ಕೇಂದ್ರ-ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.
ಜಿಲ್ಲೆಯ ಕಬ್ಬು ಬೆಳೆಗೆ 15-16 ತಿಂಗಳಾಗಿದ್ದರೂ ಸಕ್ಕರೆ ಕಾರ್ಖಾನೆಗಳು ಹೊರ ಜಿಲ್ಲೆಯಿಂದ ಕಬ್ಬು ತರಿಸಿಕೊಳ್ಳುತ್ತಿವೆ. ಜಿಲ್ಲಾಧಿಕಾರಿಯ ಸೂಚನೆಯೂ ಪಾಲನೆಯಾಗುತ್ತಿಲ್ಲ. ಇದರೊಟ್ಟಿಗೆ ಸಕ್ಕರೆ ಇಳುವರಿಯನ್ನು ಕಾರ್ಖಾನೆಗಳು ಕಡಿಮೆ ತೋರಿಸುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಭಾಗ್ಯರಾಜು, ಕಿನಕಹಳ್ಳಿ ಬಸವಣ್ಣ ಇನ್ನಿತರರು ಇದ್ದರು.