ಚಾಮರಾಜನಗರ: ಅಪರ ಜಿಲ್ಲಾಧಿಕಾರಿ ಆನಂದ್ ಅವರು ರೈತರನ್ನು ಗೂಂಡಾ, ರೌಡಿಗಳೆಂದು ಕರೆದಿದ್ದಾರೆಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ ರಸ್ತೆ ತಡೆದು ಧರಣಿ ನಡೆಸಿದರು.
ಆರ್ಟಿಒ ಮತ್ತು ಲೋಕೋಪಯೋಗಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದ್ದು, ಜಿಲ್ಲಾಡಳಿತ ನಿಯಂತ್ರಿಸಬೇಕು ಮತ್ತು ಆ ಅಧಿಕಾರಿಗಳನ್ನು ವರ್ಗಾಯಿಸಬೇಕೆಂದು ರೈತ ಮುಖಂಡರು ಒತ್ತಾಯಿಸಿದ್ದರು. ಬುಧವಾರ ಸಂಜೆ ಡಿಸಿ, ಎಸ್ಪಿ ಅವರಿಗೆ ಮನವಿ ಮಾಡಿದ ವೇಳೆ ಎಡಿಸಿ ಅವರಿಗೆ ಸಮಸ್ಯೆ ಕುರಿತು ಗಮನ ಹರಿಸಿ ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿ ಸ್ಥಳದಿಂದ ತೆರಳಿದ ನಂತರ ರೈತರನ್ನು ಗೂಂಡಾ, ರೌಡಿಗಳು ಎಂದು ಆನಂದ್ ಜರಿದಿದ್ದಾರೆ ಎನ್ನಲಾಗಿದೆ.
ಇದರಿಂದ ರೊಚ್ಚಿಗೆದ್ದ ರೈತ ಸಂಘಟನೆ ಕಾರ್ಯಕರ್ತರು ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿ 1 ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆದು ಪ್ರತಿಭಟಿಸಿದರು. ಎಡಿಸಿ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಎಡಿಸಿ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದು ಧರಣಿ ನಡೆಸಿದರು.
ಸದ್ಯ ರೈತರನ್ನ ಕಚೇರಿಗೆ ಕರೆಸಿಕೊಂಡಿರುವ ಜಿಲ್ಲಾಧಿಕಾರಿ ಸಂಧಾನ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.