ಕೊಳ್ಳೇಗಾಲ(ಚಾಮರಾಜನಗರ): ಹಾವು ಕಡಿದಿದ್ದು ಅರಿವೆಗೆ ಬಾರದೇ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಟಗರುಪುರ ಮೋಳೆ ಗ್ರಾಮದಲ್ಲಿ ನಡೆದಿದೆ. ಟಗರುಪುರ ಮೋಳೆ ಗ್ರಾಮದ ಉಮೇಶ್(36) ಮೃತ ವ್ಯಕ್ತಿ. ಜಮೀನಿನಲ್ಲಿ ನೀರು ಕಟ್ಟುವಾಗ ನಾಗರಹಾವೊಂದು ಉಮೇಶ್ ಕೈಗೆ ಕಚ್ಚಿದೆ. ಆದರೆ, ಕಡಿದದ್ದು ಗೊತ್ತಾಗದೇ ಎದುರಿಗಿದ್ದ ಹಾವನ್ನ ಹೊಡೆದು ಸಾಯಿಸಿ ಮನೆಗೆ ಹಿಂತಿರುಗಿದ್ದ.
ಮನೆಯಲ್ಲಿ ಊಟ ಮಾಡುತ್ತಿದ್ದಾಗ ಕೈ ಉರಿಯುತ್ತಿದ್ದನ್ನು ಗಮನಿಸಿದಾಗ ಹಾವು ಕಡಿದಿರಬಹುದು ಎಂಬ ಶಂಕೆಯಲ್ಲಿ ಉಮೇಶ್ಗೆ ಕುಟುಂಬಸ್ಥರು ನಾಟಿ ಔಷಧ ಕೊಡಿಸಿದ್ದಾರೆ. ಅಷ್ಟರಲ್ಲಾಗಲೇ ಹಾವಿನ ದೇಹದಲ್ಲಿ ಪೂರ್ತಿ ವಿಷ ವ್ಯಾಪಿಸಿದ್ದರಿಂದ ಉಮೇಶ್ ಅಸುನೀಗಿದ್ದಾರೆ. ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.