ಚಾಮರಾಜನಗರ: ಅಮಾವಾಸ್ಯೆ ಹಿನ್ನೆಲೆ ಮಾಜಿ ಸಚಿವ ಸೋಮಣ್ಣ ಪತ್ನಿ ಶೈಲಾಜಾ ಅವರಿಂದು ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಎಣ್ಣೆ ಮಜ್ಜನ ಹಾಗೂ ಎಳ್ಳಿನ ಅಮಾವಾಸ್ಯೆಗೆ ಶ್ರೀ ಕ್ಷೇತ್ರದ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ ಶೈಲಜಾ ಸೋಮಣ್ಣ ಮಹದೇಶ್ವರನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ನಂತರ ದೇವಾಲಯದ ಕಚೇರಿಯಲ್ಲಿ ಶ್ರೀ ಮಲೆ ಮಾದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ಭೇಟಿ ನೀಡಿ, ಪ್ರಾಧಿಕಾರ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ, ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೆಕ್ಯೂರಿಟಿ ಗಾರ್ಡ್ಗಳಿಗೆ ಬೇಳೆ, ಧಾನ್ಯಗಳು, ಎಣ್ಣೆ, ಸಾಬೂನು ಗೋದಿ ಹಿಟ್ಟು, ಅಕ್ಕಿ ಸೇರಿದಂತೆ 19 ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಿದರು. ಮಹಿಳಾ ಸಿಬ್ಬಂದಿಗಳಿಗೆ 50 ಸೀರೆಗಳನ್ನು ಸಂಕ್ರಾಂತಿ ಹಬ್ಬದ ಪ್ರಯುಕ್ತ ಉಡುಗೊರೆಯಾಗಿ ವಿತರಿಸಿದರು.
ಈ ವೇಳೆ, ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಅವರು ದಿನಗೂಲಿ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 100 ಜನ ನೌಕರರು ಸಹ ಇದ್ದಾರೆ ಎಂದು ಮಾಹಿತಿ ನೀಡಿದ್ದರಿಂದ ಅವರಿಗೂ ಸಹ ಆಹಾರ ಕಿಟ್ ಪದಾರ್ಥಗಳನ್ನು ವಿತರಣೆ ಮಾಡುವುದಾಗಿ ತಿಳಿಸಿದ್ದಾರೆ.
ಮಾದಪ್ಪನ ಬೆಟ್ಟದಲ್ಲಿ ಭಕ್ತ ಸಾಗರ: ಅಮಾವಾಸ್ಯೆ ಪ್ರಯುಕ್ತ ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಶೇಷ ಪೂಜೆ ಉತ್ಸವಾದಿಗಳು ಜರುಗಿದವು. ಎಳ್ಳಿನ ಅಮಾವಾಸ್ಯೆ ಪ್ರಯುಕ್ತ ಕ್ಷೇತ್ರಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿ ಮಹದೇಶ್ವರ ದರ್ಶನ ಪಡೆದು ಚಿನ್ನದ ರಥೋತ್ಸವ, ಬೆಳ್ಳಿ ರಥೋತ್ಸವ, ಬಸವ ವಾಹನ, ರುದ್ರಾಕ್ಷಿ ಮಂಟಪ, ಹುಲಿವಾಹನ ಸೇವೆಗಳನ್ನು ಮಾಡುವ ಮೂಲಕ ತಮ್ಮ ಹರಕೆ ಸಮರ್ಪಿಸಿದರು.
ಅಮಾವಾಸ್ಯೆ ಪೂಜೆ ಹಿನ್ನೆಲೆ ಬೆಂಗಳೂರು, ರಾಮನಗರ, ಕನಕಪುರ, ಮೈಸೂರು, ಮಂಡ್ಯ ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮೈಸೂರು ನಂಜನಗೂಡು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಶ್ರೀ ಕ್ಷೇತ್ರಕ್ಕೆ ಆಗಮಿಸಿ ವಿವಿಧ ಸೇವೆಗಳನ್ನು ಸಮರ್ಪಿಸಿ ದರ್ಶನ ಪಡೆದರು. ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ಶ್ರೀ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ವ್ಯವಸ್ಥಿತ ಸರತಿ ಸಾಲು, ಶಿಫಾರಸು ಪತ್ರ ತಂದವರಿಗೆ ನೇರದರ್ಶನ, 60 ವರ್ಷ ಮೇಲ್ಪಟ್ಟವರಿಗೂ ವಿಶೇಷ ದರ್ಶನ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿತ್ತು.
ದೇವಾಲಯದ ರಾಜಗೋಪುರ ಗರ್ಭಗುಡಿಯ ಗೋಪುರ, ಕಟ್ಟೆ ಬಸವೇಶ್ವರ ದೇವಾಲಯದ ಒಳಾಂಗಣ ಹೊರಾಂಗಣ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಆಕರ್ಷಕ ವಿದ್ಯುತ್ ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿತ್ತು.
ಇದನ್ನೂ ಓದಿ: ಶಾಲಾ ಮಕ್ಕಳಿಂದ 'ರಾಮ ನಾಮ ಹಾಡಿರೋ ರಾಮ ಬರುವನು'- ವಿಡಿಯೋ ನೋಡಿ