ಚಾಮರಾಜನಗರ : ಇಂದಿನ ದಿನಗಳಲ್ಲಿ ಕಟ್ಟಕಡೆಯ ವ್ಯಕ್ತಿ ಮನೆಯಲ್ಲೂ ಟಿವಿ ಇರುತ್ತದೆ. ಲೋನ್ ಮೂಲಕ ಬೈಕ್ ಕೊಂಡಿರುತ್ತಾರೆ. ಟಿವಿ, ಬೈಕ್ ಇಟ್ಡುಕೊಂಡ ಮಾತ್ರಕ್ಕೆ ಶ್ರೀಮಂತರಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಟಿವಿ, ಬೈಕ್ ಇದ್ರೇ ಬಿಪಿಎಲ್ ಪಡಿತರ ಚೀಟಿ ರದ್ದು ಮಾಡುವುದಾಗಿ ಹೇಳಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸುರೇಶ್‌ಕುಮಾರ್ ಅವರು, ಕತ್ತಿ ಅವರು ಯಾವ ದೃಷ್ಟಿಯಲ್ಲಿ ಮಾತನಾಡಿದ್ದಾರೋ ತಿಳಿಯದು.
ಇವತ್ತಿನ ದಿನಗಳಲ್ಲಿ ಕಟ್ಟಕಡೆಯ ವ್ಯಕ್ತಿ ಮನೆಯಲ್ಲೂ ಟಿವಿ ಇರುವುದು ಕಾಮನ್. ಲಾಕ್‌ಡೌನ್ ಸಮಯದಲ್ಲಿ ಮಕ್ಕಳು ಹೆಚ್ಚು ಟಿವಿ ನೋಡಿ ಪಾಠ ಕಲಿತಿದ್ದಾರೆ. ಟಿವಿ ಇಲ್ಲದಿದ್ದರೆ ವರ್ಚುವಲ್ ಶಿಕ್ಷಣ ಕಷ್ಟವಾಗುತ್ತಿತ್ತು ಎಂದು ಪರೋಕ್ಷವಾಗಿ ಕತ್ತಿ ಹೇಳಿಕೆ ವಿರೋಧಿಸಿದರು. ಜತೆಗೆ ಈ ಕುರಿತು ಅವರೊಂದಿಗೆ ಚರ್ಚಿಸುತ್ತೇನೆಂದರು.
ಇದೇ ವೇಳೆ ಬೆಲೆ ಏರಿಕೆ ಕುರಿತು ಮಾತನಾಡಿ, ಯಾವ ಸರ್ಕಾರಗಳು ಬಡವನ ಮೇಲೆ ಬರೆ ಎಳೆಯುವುದಿಲ್ಲ. ಬೆಲೆ ಹೆಚ್ಚಾದಾಗ ಮಾತನಾಡುತ್ತಾರೆ, ಕಡಿಮೆ ಇದ್ದಾಗ ಯಾರು ಬೆಲೆ ಬಗ್ಗೆ ಮಾತನಾಡಲ್ಲ, ಕ್ರಮೇಣ ದರ ಬಿಸಿ ಕಡಿಮೆಯಾಗಲಿದೆ ಎಂದು ಪ್ರಧಾನಿ ಅವರೇ ಹೇಳಿದ್ದಾರೆ. ಹಾಗಾಗಿ ಬೆಲೆ ಕಡಿಮೆಯಾಗಲಿದೆ ಎಂದರು.