ಚಾಮರಾಜನಗರ : ರೈತರ ಸೋಗಿನಲ್ಲಿ ಹಸುಗಳನ್ನು ಕೇರಳ, ತಮಿಳುನಾಡಿನ ಕಸಾಯಿಖಾನೆಗೆ ಸಾಗಿಸುತ್ತಿದ್ದವರನ್ನು ಪತ್ತೆ ಹಚ್ಚಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿ ರಸ್ತೆಯಲ್ಲಿ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ಅಣ್ಣೂರು ಗ್ರಾಮದ ಸಿ.ಮಧು, ನಂಜುಂಡ, ಸಿದ್ದರಾಜು ಎಂಬುವರು ಬಂಧಿತ ಆರೋಪಿಗಳು. ಚಿಕ್ಕಂಡು ಎಂಬಾತ ಪರಾರಿಯಾಗಿರುವ ಮತ್ತೊಬ್ಬೆ ಆರೋಪಿ.
ಜಮೀನುಗಳ ಹಾದಿಯಲ್ಲಿ ಹಸುಗಳನ್ನು ಮೇಯಿಸುವಂತೆ ನಡೆಸಿಕೊಂಡು ಒಂದು ಊರಾದ ಬಳಿಕ ಮತ್ತೊಂದು ಊರಂತೆ ದಾಟಿ ಪೊಲೀಸರ ಕಣ್ತಪ್ಪಿಸಿ ತಮಿಳುನಾಡು ಮತ್ತು ಕೇರಳದ ಕಸಾಯಿಖಾನೆಗಳಿಗೆ ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಬೇಗೂರು ಪೊಲೀಸರು ದಾಳಿ ನಡೆಸಿ ಗೋವುಗಳನ್ನು ರಕ್ಷಿಸಿದ್ದಾರೆ. ಸದ್ಯ 11 ಹಸುಗಳನ್ನು ಮೈಸೂರಿನ ಪಿಂಜಾರಪೋಳಗೆ ರವಾನಿಸಲಾಗಿದೆ. ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂದೂಕು ಹಿಡಿದು ಬೇಟೆಗೆ ಹೊರಟವ ಅಂದರ್ : ಮತ್ತೊಂದು ಪ್ರಕರಣದಲ್ಲಿ ಕಾಡು ಪ್ರಾಣಿಗಳನ್ನ ಬೇಟೆಯಾಡಲು ಅಕ್ರಮವಾಗಿ ನಾಡ ಬಂದೂಕನ್ನು ಸಂಗ್ರಹಿಸಿಟ್ಟಿದ್ದ ವ್ಯಕ್ತಿಯೋರ್ವನನ್ನು ಸಿಐಡಿ ಪೊಲೀಸರು ಹಾಗೂ ಗ್ರಾಮಾಂತರ ಠಾಣಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ಶಾಂತರಾಜು(35) ಬಂಧಿತ ಆರೋಪಿ.
ಈತ ತಾಲೂಕಿನ ಇಕ್ಕಡಹಳ್ಳಿ ಗ್ರಾಮದ ಚಾನಲ್ ರಸ್ತೆಯಲ್ಲಿ ಅಕ್ರಮ ಬಂದೂಕನ್ನು ಹಿಡಿದು ಕಾಡು ಪ್ರಾಣಿಗಳ ಬೇಟೆಗೆ ಹೋಗುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಠಾಣೆಯ ಪಿಎಸ್ಐ ಅಶೋಕ್ ಹಾಗೂ ಸಿಐಡಿ ಅರಣ್ಯ ಸಂಚಾರಿ ದಳದ ಪಿಎಸ್ಐ ದಿಕ್ಷೀತ್ ಕುಮಾರ್ ಜಂಟಿ ಕಾರ್ಯಾಚರಣೆ ನಡೆಸಿ ಬಂದೂಕು ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ವಿಶ್ವದ ಅತಿ ದೊಡ್ಡ ಏತ ನೀರಾವರಿ ಯೋಜನೆ ಕಣ್ತುಂಬಿಕೊಂಡ ಚಾಮರಾಜನಗರ ರೈತರು
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಅರಣ್ಯ ಸಂಚಾರಿ ದಳದ ಸಿಬ್ಬಂದಿ ತಕೀವುಲ್ಲಾ, ಬಸವರಾಜು, ಸ್ವಾಮಿ, ರಾಮಚಂದ್ರ ಮತ್ತಿತರರು ಇದ್ದರು.