ಚಾಮರಾಜನಗರ: ಕಾವೇರಿ ಹಾಗೂ ಮಲೆಮಹದೇಶ್ವರ ವನ್ಯಜೀವಿಧಾಮದಲ್ಲಿ 40 ದಿನಕ್ಕೆ 6 ಆನೆಗಳು ಮೃತಪಟ್ಟಿದ್ದು, ಪರಿಸರಪ್ರೇಮಿಗಳಲ್ಲಿ ಕಳವಳ ತರಿಸಿದೆ.
ಕಾವೇರಿ ವನ್ಯಧಾಮದಲ್ಲಿ ಗರ್ಭಿಣಿ ಆನೆ ಸೇರಿ 4 ಆನೆಗಳು, ಮಲೆ ಮಹದೇಶ್ವರ ವನ್ಯಧಾಮದಲ್ಲಿ ಮೂರು ದಿನಗಳಲ್ಲಿ ಒಂದು ಹೆಣ್ಣಾನೆ ಮತ್ತು ಒಂದು ಗಂಡಾನೆಯು ಮೃತಪಟ್ಟಿವೆ. 5 ಆನೆಗಳ ಸಾವು ಆಕಸ್ಮಿಕವಾಗಿ ಬಿದ್ದು ಸತ್ತಿದೆ ಎಂದು ವರದಿ ಬಂದಿದ್ದು, ಶುಕ್ರವಾರ ಹನೂರು ತಾಲೂಕಿನ ದಂಟಳ್ಳಿಯಲ್ಲಿ ವಿದ್ಯುತ್ ಪ್ರವಹಿಸಿ ಗಂಡಾನೆಯೊಂದು ಮೃತಪಟ್ಟಿದೆ.
ಕಾವೇರಿ ವನ್ಯಧಾಮದ ಕೌದಳ್ಳಿ ವನ್ಯಜೀವಿ ವಲಯದ ದಬ್ಬಗುಳಿ ಬೀಟ್‍ನಲ್ಲಿ ತುಂಬು ಗರ್ಭಿಣಿಯಾಗಿದ್ದ ಆನೆ ಬೆಟ್ಟದಿಂದ ಇಳಿಯುವ ವೇಳೆ ಭಾರ ತಾಳಲಾರದೇ ಕಾಲು ಜಾರಿಗೆ ಕೆಳಕ್ಕೆ ಉರುಳಿದೆ. ರಭಸವಾಗಿ ಉರುಳಿದ ಆನೆ ಕೆಳಗಿದ್ದ ಬಂಡೆಗೆ ಬಲವಾಗಿ ಗುದ್ದಿದ ಪರಿಣಾಮ ಮೃತಪಟ್ಟಿತ್ತು.
ಉಗನಿಯ ಬೀಟ್‍ನ ಕೊಂಗಮಡುಹಳ್ಳದ ಬಳಿ ಕರ್ನಾಟಕದಿಂದ ತಮಿಳುನಾಡಿಗೆ ಕಾವೇರಿ ನದಿ ದಾಟುತ್ತಿದ್ದ ಆನೆಗಳ ಪೈಕಿ ಒಂದು ಆನೆ ಆಕಸ್ಮಿಕವಾಗಿ ಬಂಡೆಯಿಂದ ಕೆಳಗಡೆ ಬಿದ್ದಿದೆ. ತಲೆ ಹಾಗೂ ಎದೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಮೃತಪಟ್ಟಿತ್ತು.
ಮತ್ತೊಂದು ಪ್ರಕರಣದಲ್ಲಿ ಆನೆ ತಲೆಬುರುಡೆ ಪತ್ತೆಯಾಗಿತ್ತು. ಮಲೆಮಹದೇಶ್ವರ ವನ್ಯಜೀವಿಧಾಮದಲ್ಲಿ ಸ್ವಾಭಾವಿಕವಾಗಿ ಎರಡು ಆನೆಗಳು ಮೃತಪಟ್ಟ ಕಳೇಬರ ದೊರೆತ ಬಳಿಕ ಇಂದು ವಿದ್ಯುತ್ಗೆ ಆನೆ ಬಲಿಯಾಗಿದ್ದು ಸೇರಿಸಿಕೊಂಡರೆ ತಿಂಗಳಲ್ಲಿ 6 ಆನೆ ಬಲಿಯಾಗಿರುವುದು ಪರಿಸರ ಪ್ರೇಮಿಗಳಲ್ಲಿ ಆತಂಕ ಹುಟ್ಟಿಸಿದೆ.