ಕೊಳ್ಳೇಗಾಲ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಜನರು ಗುಂಪುಗೂಡುವುದು ಸೇರಿದಂತೆ ಜಾತ್ರೆ, ಸಮಾರಂಭಗಳನ್ನು ನಡೆಸುವುದನ್ನು ರಾಜ್ಯ ಸರ್ಕಾರ ನಿಷೇಧಿಸಿದೆ. ಅಲ್ಲದೆ ರಾಜ್ಯಾದ್ಯಂತ 144(3) ಸೆಕ್ಷನ್ ಜಾರಿಯಲ್ಲಿದೆ.
ಎಸ್.ಎಸ್.ಎಲ್.ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್, ಕೊಳ್ಳೇಗಾಲ ಟೌನ್ ಹಾಗೂ ಸುತ್ತಲಿನ ಕೆಲವು ಗ್ರಾಮಗಳಿಗೆ ತೆರಳಿ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಈ ಸಮಯದಲ್ಲಿ ಮಕ್ಕಳೊಂದಿಗೆ ಮಾತನಾಡುವಾಗ ಮಾಸ್ಕ್ ಸಹ ಬಳಸದಿರುವುದು ಸರ್ಕಾರದ ಆದೇಶವನ್ನು ಗಾಳಿಗೆ ತೂರಿದಂತಾಗಿದೆ.
ಸಚಿವರು ವಿದ್ಯಾರ್ಥಿಗಳನ್ನು ಭೇಟಿ ಮಾಡಲು ಮನೆ ಮನೆಗೆ ತೆರಳುವ ವೇಳೆಯಲ್ಲೂ ಸುತ್ತಮುತ್ತಲಿನ ನಿವಾಸಿಗಳು ಜಾತ್ರೆ ಮಾದರಿಯಲ್ಲಿ ಸಚಿವರ ಸುತ್ತ ಸೇರಿರುವುದು ಕಂಡುಬಂತು. ಮಕ್ಕಳ ಪರೀಕ್ಷೆಯ ಬಗ್ಗೆ ಅಪಾರ ಕಾಳಜಿ ವಹಿಸಿದಂತೆ ಕಂಡರೂ ಮಹಾಮಾರಿ ಕೊರೊನಾ ಭೀತಿ ಇರುವ ಸಮಯದಲ್ಲಿ ಭೇಟಿ ಮಾಡಬೇಕಿತ್ತಾ ಎಂಬುದು ಕೆಲವರ ಅಭಿಪ್ರಾಯವಾಗಿದೆ.
ಭಯ ಬಿಡಿ ಪರೀಕ್ಷೆ ಎದುರಿಸಿ...
ಮನೆ ಮನೆಗೆ ತೆರಳಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಕ್ಕಳೊಂದಿಗೆ ಮುಕ್ತವಾಗಿ ಚರ್ಚಿಸಿದರು. ಪರೀಕ್ಷೆ ಹತ್ತಿರವಿದ್ದು, ಓದಿನ ಕಡೆ ಹೆಚ್ಚಿನ ಗಮನ ವಹಿಸಬೇಕು ಹಾಗೂ ಪರೀಕ್ಷೆ ಸಮಯದಲ್ಲಿ ಸಾಧ್ಯವಾದರೆ ಮಾಸ್ಕ್ ಬಳಸುವಂತೆ ಸಲಹೆ ನೀಡಿದ್ದಾರೆ.
ಈ ಸಮಯದಲ್ಲಿ ಶಾಸಕ ಎನ್.ಮಹೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಚ್.ನಾರಾಯಣ್ ರಾವ್, ವಿಭಾಗಾಧಿಕಾರಿ ಎಂ ನಿಕಿತ ಚಿನ್ನಸ್ವಾಮಿ ಮತ್ತಿತರಿದ್ದರು.