ಚಾಮರಾಜನಗರ : ಮಂತ್ರಾಲಯ ಗುರುರಾಯರು ಕಲಿಯುಗದ ಕಾಮಧೇನುವೆಂದೇ ಭಕ್ತರ ನಂಬಿಕೆ. ವರನಟ ಡಾ.ರಾಜ್ ಅವರು ಕೂಡ ರಾಘವೇಂದ್ರ ಶ್ರೀಗಳ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡಿ ಗಮನ ಸೆಳೆದಿದ್ದು ನಿಮಗೆ ಗೊತ್ತೆ ಇದೇ. ಆದರೆ, ಅವರು ಅಭಿಮಾನಿಯೊಬ್ಬರಿಗೆ ಮಂತ್ರಾಲಯದ ಹಾದಿ ತೋರಿದ ಕಥೆ ಇಲ್ಲಿದೆ ನೋಡಿ.
1996ರ ಒಂದು ಮಧ್ಯಾಹ್ನ ಚಾಮರಾಜನಗರದ ಹರಳುಕೋಟೆ ಜನಾರ್ದನ ಸ್ವಾಮಿಯ ಅರ್ಚಕರಾಗಿದ್ದ ಅನಂತಪ್ರಸಾದ್, ಡಾ.ರಾಜ್ ಅವರು ಹುಟ್ಟೂರು ಗಾಜನೂರಿಗೆ ಬಂದ ವಿಚಾರ ತಿಳಿದು ಭೇಟಿ ಮಾಡಲು ತೆರಳುತ್ತಾರೆ. ಭೇಟಿಯೂ ಆಗಿ ಅಣ್ಣಾವ್ರೊಂದಿಗೆ ಮಾತನಾಡುತ್ತಿದ್ದ ವೇಳೆ ರಾಯರ ಸನ್ನಿಧಾನಕ್ಕೆ ಹೋಗಿದ್ದೀರಾ..? ಎಂದು ಕೇಳಿದ್ದಕ್ಕೆ ಅನಂತಪ್ರಸಾದ್ ಇಲ್ಲ, ಅಲ್ಲಿಗೆ ಹೇಗೆ ಹೋಗುವುದು ಎಂದು ಮರುಪ್ರಶ್ನೆ ಕೇಳುತ್ತಾರೆ. ಬಸ್ನ ಮಾರ್ಗವನ್ನೆಲ್ಲಾ ತಿಳಿಸಿದ ಅಣ್ಣಾವ್ರು ರಾಯರ ದರ್ಶನ ಮಾಡಿ ಎಲ್ಲಾ ಒಳ್ಳೆಯದಾಗಲಿದೆ ಎಂದು ಉಭಯ ಕುಶಲೋಪರಿ ವಿಚಾರಿಸಿ ಕಳುಹಿಸುತ್ತಾರೆ.
ಅಣ್ಣಾವ್ರ ಕಟ್ಟಾ ಅಭಿಮಾನಿಯಾಗಿದ್ದ ಅನಂತಪ್ರಸಾದ್ ಕೆಲವು ದಿನಗಳ ಬಳಿಕ ರಾಯರ ದರ್ಶನ ಮಾಡಿ ಬರುತ್ತಾರೆ. ಈವರೆಗೆ 50ಕ್ಕೂ ಹೆಚ್ಚು ಸಲ ಮಂತ್ರಾಲಯಕ್ಕೆ ಹೋಗಿರುವ ಇವರು ಯಾರಾದರೂ ಮಂತ್ರಾಲಯ ಹೋಗದಿರುವರಿದ್ದರೆ ಅವರನ್ನು ರಾಯರ ದರ್ಶನ ಮಾಡಿಸುವ ಕೆಲಸ ಮಾಡುತ್ತಿದ್ದು, ಈವರೆಗೆ 800ಕ್ಕೂ ಹೆಚ್ಚು ಮಂದಿಗೆ ರಾಯರ ದರ್ಶನ ಮಾಡಿಸಿದ್ದಾರೆ.
ಅಣ್ಣಾವ್ರ ಜನ್ಮದಿನವಾದ ಇಂದು ಅನಂತಪ್ರಸಾದ್ ಮಾತನಾಡಿ, ಅವರು ಮಾಡಿರದ ಪಾತ್ರವಿರಲಿಲ್ಲ, ಕನ್ನಡ ಎಷ್ಟು ಸುಂದರ ಭಾಷೆ ಎಂಬುವುದು ಅವರ ಮಾತು ಕೇಳಿದರೆ ಸಾಕು, ಅಷ್ಟು ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಾರೆ. ರಾಜ್ ಕುಮಾರ್ ಅವರಿಂದ ಮಂತ್ರಾಲಯಕ್ಕೆ ಹೋದೆ. ಬಳಿಕ ಅವರಿಂದಲೇ ಪ್ರೇರಣೆಯಾಗಿ 800 ಮಂದಿಗೆ ರಾಯರ ದರ್ಶನ ಮಾಡಿಸಿರುವುದಾಗಿ ತಿಳಿಸಿದರು.
ಇದನ್ನೂ ಓದಿ: ಆರ್ಜಿವಿ ಹಾಗೂ ರಿಯಲ್ ಸ್ಟಾರ್ ಡೆಡ್ಲಿ ಜೋಡಿ ಎಂದ ಅಭಿನಯ ಚಕ್ರವರ್ತಿ!