ಚಾಮರಾಜನಗರ: ಹೈನುಗಾರಿಕೆಯಿಂದಲೇ ಜೀವನ ಕಟ್ಟಿಕೊಂಡು ಬದುಕು ಸುಂದರವಾಗಿಸಿಕೊಳ್ಳಿ ಎಂದು ಸರ್ಕಾರ ಪ್ರೋತ್ಸಾಹಿಸಿದರೇ, ಅರಣ್ಯ ಇಲಾಖೆ ಮಾತ್ರ ಹೆಚ್ಚು ಹಸು - ಮೇಕೆ ಸಾಕಬೇಡಿ ಎಂದು ಸಾರ್ವಜನಿಕ ನೊಟೀಸ್ ಅಂಟಿಸಿರುವ ಘಟನೆ ಹನೂರು ತಾಲೂಕಿನ ಗೋಪಿನಾಥಂ ಗ್ರಾಮದಲ್ಲಿ ನಡೆದಿದೆ.
ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಗೋಪಿನಾಥಂ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಎಡವಟ್ಟಿನ ಸಲಹೆಯೊಂದನ್ನು ಕೊಟ್ಟಿದ್ದು, ಅಗತ್ಯವಿರುವಷ್ಟು ಮಾತ್ರ ಹಸು - ಮೇಕೆ ಸಾಕಿ ಹೆಚ್ಚಿನವುಗಳನ್ನು ಬೇರೆಡೆಗೆ ಸಾಗಿಸಬೇಕು. ಜಾನುವಾರಗಳನ್ನು ಕಾಡಿಗೆ ಬಿಡುವುದರಿಂದ ಅರಣ್ಯ ನಾಶವಾಗುತ್ತಿದೆ ಎಂದು ಹೇಳಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಎರಡು ದಿನಗಳ ಕಾಲ ಟಿಆರ್ ತಂಡದವರು ಗೋಪಿನಾಥಂ ವಲಯಕ್ಕೆ ಭೇಟಿ ನೀಡಿದ್ದ ವೇಳೆ ಹೆಚ್ಚಿನ ದನಕರುಗಳು ಇದ್ದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾಗುವಳಿಗೆ ಬೇಕಾದಷ್ಟು ಹಸು-ಮೇಕೆ ಇಟ್ಟುಕೊಂಡು ಉಳಿದವುಗಳನ್ನು ಬೇರೆಡೆಗೆ ಸಾಗಿಸಬೇಕು. ಅರಣ್ಯದೊಳಕ್ಕೆ ದನ - ಮೇಕೆ ಬಿಟ್ಟರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.
ಖಂಡನೆ - ಆಕ್ರೋಶ: ಅರಣ್ಯ ಇಲಾಖೆ ಕೊಟ್ಟಿರುವ ಈ ನೊಟೀಸ್ಗೆ ರೈತಸಂಘದ ಮುಖಂಡ ಹೊನ್ನೂರು ಪ್ರಕಾಶ್ ಆಕ್ರೋಶ ಹೊರಹಾಕಿದ್ದಾರೆ. ಅರಣ್ಯ ಇಲಾಖೆಯವರು ಕೇವಲ ಮರಗಳನ್ನೇ ತಿಂದು ಬದುಕುತ್ತೇವೆ, ಅನ್ನ ಬೇಡ ಎಂದಲ್ಲಿ ಇನ್ಮುಂದೆ ನಾವು ಹಸು ಸಾಕುವುದಿಲ್ಲ, ಗೋರಕ್ಷಣೆ ಎಂದು ಸರ್ಕಾರ ಕಾಯ್ದೆ ಮಾಡಿದರೇ ಅರಣ್ಯ ಇಲಾಖೆ ಹಸುಗಳನ್ನೆ ಸಾಕಬೇಡಿ ಎನ್ನುತ್ತಿದೆ.
ಕಾಡಂಚಿನ ಜನರು ಜಾನುವಾರುಗಳನ್ನು ಮೇಯಿಸಲು ಅವಕಾಶ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದರೂ ಅರಣ್ಯ ಇಲಾಖೆ ಈ ನೊಟೀಸ್ ಕೊಟ್ಟಿದೆ. ಇನ್ನೊಂದು ವಾರದಲ್ಲಿ ನೊಟೀಸ್ ಅನ್ನು ಹಿಂಪಡೆಯದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ. ಒಟ್ಟಿನಲ್ಲಿ ಈ ವಿವಾದಾತ್ಮಕ ನೊಟೀಸ್ನಿಂದ ಸ್ಥಳೀಯರು ಆಕ್ರೋಶ - ಆತಂಕ ಹೊರಹಾಕಿದ್ದು, ಅರಣ್ಯ ಇಲಾಖೆ ಹೊಸ ನೀತಿ ಸ್ಥಳೀಯರನ್ನು ಕೆರಳುವಂತೆ ಮಾಡಿದೆ.
ಇದನ್ನೂ ಓದಿ: ಕಡಬ: ತೋಟಕ್ಕೆ ಕಾಡುಕೋಣಗಳ ದಾಂಗುಡಿ, ರೈತರಿಗೆ ಮಂಡೆಬಿಸಿ