ಚಾಮರಾಜನಗರ: ಕರ್ನಾಟಕದ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಇಂದಿನಿಂದ ದೀಪಾವಳಿ ಜಾತ್ರೆ ಆರಂಭಗೊಂಡಿದ್ದು, ಭಕ್ತ ಸಾಗರವೇ ಹರಿದು ಬರುತ್ತಿದೆ. ನ. 10 ರಿಂದ 14 ರವರಗೆ ನಡೆಯುವ ಮಾದಪ್ಪನ ದೀಪಾವಳಿ ಜಾತ್ರೆ ಹಾಗೂ ಮಾದಪ್ಪನ ಮಹಾ ರಥೋತ್ಸವಕ್ಕೆ ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಗತ್ಯ ಸಿದ್ಧತೆ ಕೈಗೊಂಡಿದ್ದು, ವಿಶೇಷ ಪೂಜಾ ಕಾರ್ಯಗಳು ಆರಂಭಗೊಂಡಿವೆ.
ಜಾತ್ರೆಗೆ ಬರುವ ಲಕ್ಷಾಂತರ ಮಂದಿ ಭಕ್ತರಿಗೆ ಪ್ರಾಧಿಕಾರವು ನಿರಂತರ ದಾಸೋಹಕ್ಕೆ ಮುಂದಾಗಿದ್ದು, ಬೆಳಗ್ಗೆ ತಿಂಡಿ, ಮಧ್ಯಾಹ್ನ, ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ಅಲ್ಲಲ್ಲಿ ಕುಡಿಯುವ ನೀರು, ಶೌಚಗೃಹದ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಭಕ್ತರಿಗೆ ಪ್ರಸಾದವನ್ನಾಗಿ ನೀಡುವ ಸಲುವಾಗಿ ಸಮಾರು ನಾಲ್ಕರಿಂದ ಐದು ಲಕ್ಷ ಲಾಡು ಸಿದ್ಧಪಡಿಸಿಕೊಂಡಿದೆ.
ದೀಪಾವಳಿ ಜಾತ್ರೆ ನಿಮಿತ್ತ ದೇವಾಲಯದ ರಾಜಗೋಪುರ, ಮುಖ್ಯದ್ವಾರ ಹಾಗೂ ಇತರ ದ್ವಾರಗಳನ್ನು ತಳಿರು ತೋರಣ, ಹೂಗಳಿಂದ ಅಲಂಕರಿಸಲಾಗಿದೆ. ಅಲ್ಲದೇ ದೇವಾಲಯ ಹಾಗೂ ಸಾಲೂರು ಮಠಕ್ಕೆ ತೆರಳುವ ಮಾರ್ಗವನ್ನು ಹಾಗೂ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಮಾದಪ್ಪನ ದೇಗುಲಕ್ಕೆ ಮಾಡಲಾಗಿರುವ ಆಕರ್ಷಕ ವಿದ್ಯುತ್ ದೀಪಾಲಂಕಾರ ನೋಡುಗರನ್ನು ಆಕರ್ಷಿಸುತ್ತಿದೆ. ವಿದ್ಯುತ್ ದೀಪಾಲಂಕಾರದಿಂದ ಮಾದಪ್ಪನ ಸನ್ನಿಧಿ ಕೈಲಾಸದ ರಾಜಧಾನಿಯಂತೆ ಕಂಗೊಳಿಸುತ್ತಿದೆ.
ಬೈಕ್ಗಳ ಪ್ರವೇಶ ಬಂದ್: ಐದು ದಿನಗಳ ಕಾಲ ಮಹದೇಶ್ವರಬೆಟ್ಟದಲ್ಲಿ ನಡೆಯುವ ಮಾದಪ್ಪನ ದೀಪಾವಳಿ ಜಾತ್ರೆಗೆ ಬರುವ ದ್ವಿಚಕ್ರ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿದೆ. ವಾಹನ ನಿಲುಗಡೆ ಹಾಗೂ ರಸ್ತೆ ಕಿರಿದಾಗಿರುವ ಕಾರಣ ಟ್ರಾಫಿಕ್ ಸಮಸ್ಯೆ ಉಂಟಾಗದಿರಲೆಂದು ಜಿಲ್ಲಾಧಿಕಾರಿ 5 ದಿನ ಕಾಲ ತಾಳುಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಬೈಕ್ ಪ್ರವೇಶವನ್ನು ನಿರ್ಬಂಧಿಸಿದ್ದಾರೆ.
ಜಾತ್ರೆಗೆ ರಾಜ್ಯದ ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಹೀಗಾಗಿ ಚಾಮರಾಜನಗರ ಜಿಲ್ಲೆಯ ಎಲ್ಲ ಡಿಪೋಗಳಿಂದ ಸುಮಾರು 500ಕ್ಕೂ ಹೆಚ್ಚು ಬಸ್ ಸೌಲಭ್ಯವನ್ನು ಕಲ್ಪಿಸಲಾಗಿದೆ. ದೀಪಾವಳಿ ಹಬ್ಬದ ಸಂದರ್ಭವಾಗಿರುವುದರಿಂದ ಬೆಂಗಳೂರು ಹಾಗೂ ಮೈಸೂರು ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವರು. ಜೊತೆಗೆ ಜಿಲ್ಲೆಯ ವಿವಿಧೆಡೆಯಿಂದಲೂ ಬರುವ ಭಕ್ತರಿಗೆ ತೊಂದರೆಯಾಗಬಾರದು ಎನ್ನುವ ನಿಟ್ಟಿನಲ್ಲಿ ಹೆಚ್ಚಿನ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ ಎನ್ನುತ್ತಾರೆ ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್ ಕುಮಾರ್.
ಸೂಕ್ತ ಬಂದೋಬಸ್ತ್: ಬೆಟ್ಟಕ್ಕೆ ಹೋಗಲು ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಸಲುವಾಗಿ ತಾಳಬೆಟ್ಟದಲ್ಲಿ ಬಸ್ ನಿಲ್ದಾಣ ಮಾಡಲಾಗಿದೆ. ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಸಂಚಾರಕ್ಕೆ ತಡೆಯೊಡ್ಡಲಾಗಿದೆ. ಜಾತ್ರಾ ಮಹೋತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದೆಂದು ಮುನ್ನೆಚ್ಚರಿಕೆ ಕ್ರಮ ವಹಿಸಿ ಪೊಲೀಸ್ ಇಲಾಖೆಯಿಂದ ಕೆಎಸ್ಆರ್ಪಿ ತುಕಡಿ, ಜಿಲ್ಲೆಯ ವಿವಿಧೆಡೆಯಿಂದ ಪೊಲೀಸ್ ಅಧಿಕಾರಿಗಳು ಹಾಗೂ ಹೋಂ ಗಾರ್ಡ್ಸ್ಗಳನ್ನು ನಿಯೋಜಿಸಲಾಗಿದೆ. ಒಟ್ಟಾರೆ 550 ಜನರ ಪೊಲೀಸ್ ಹಾಗೂ ಹೋಂ ಗಾರ್ಡ್ಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ದೀಪಾವಳಿ ಜಾತ್ರೆಗೆ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಹಾಗೂ ವಾಹನಗಳ ಮೂಲಕ ಸುಮಾರು 5 ರಿಂದ 6 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ.
ಇದನ್ನೂ ಓದಿ: ನ.2ರಿಂದ ಹಾಸನಾಂಬೆ ಜಾತ್ರಾ ಮಹೋತ್ಸವ: 24ಗಂಟೆಯೂ ದರ್ಶನ ಭಾಗ್ಯ