ಚಾಮರಾಜನಗರ: ಕೋವಿಡ್ ನಿಂದ ಮೃತಪಡುವ ಸೋಂಕಿತರ ಅಂತ್ಯಸಂಸ್ಕಾರದ ಹೊಣೆಯನ್ನು ಖಾಸಗಿ ಏಜೆನ್ಸಿಗೆ ಟೆಂಡರ್ ಮೂಲಕ ವಹಿಸಲಾಗಿದ್ದು, ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದ ಸ್ವಯಂ ಸೇವಕರ ಸೇವೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.
ಜಿಲ್ಲಾಡಳಿತ ಟೆಂಡರ್ ಕರೆದು ಸಿವೈಎಸ್ ಎಂಬ ಏಜೆನ್ಸಿಗೆ ಅಂತ್ಯಕ್ರಿಯೆ ಜವಾಬ್ದಾರಿ ವಹಿಸಿದ್ದು, ಅವರೀಗ ಜಿಲ್ಲೆಯಾದ್ಯಂತ ತಂಡಗಳನ್ನು ರಚಿಸಿ ಅಂತ್ಯಕ್ರಿಯೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಒಂದು ಅಂತ್ಯಕ್ರಿಯೆಗೆ 3800 ರೂ. ದರ ನಿಗದಿಪಡಿಸಲಾಗಿದೆ. ಏಜೆನ್ಸಿ ಸಿಬ್ಬಂದಿಗೆ ಜಿಲ್ಲಾಡಳಿತವೇ ಪಿಪಿಇ ಕಿಟ್, ವಾಹನ ವ್ಯವಸ್ಥೆ ಮಾಡಲಿದ್ದು, ಮೃತರ ಸಂಬಂಧಿಕರು ಇಚ್ಛೆಪಟ್ಟ ಸ್ಥಳದಲ್ಲಿ ಅಂದರೆ ಕೋವಿಡ್ ಸ್ಮಶಾನದಲ್ಲಿ ಇಲ್ಲವೇ ತೋಟ, ಗ್ರಾಮಗಳ ಸ್ಮಶಾನದಲ್ಲಿ ಕೋವಿಡ್ ನಿಯಮಾನುಸಾರ ಅಂತ್ಯಕ್ರಿಯೆ ನಡೆಸಲಿದ್ದು, ಪ್ರತಿ ತಂಡದಲ್ಲಿ 4-5 ಮಂದಿ ಇರಲಿದ್ದಾರೆ.
ಕೋವಿಡ್ ಮೊದಲನೆ ಅಲೆಯಿಂದಲೂ ಅಜಾದ್ ಹಿಂದೂ ಸೇನೆ, ಬಿಜೆಪಿ, ಆರ್ ಎಸ್ ಎಸ್ ಮತ್ತು ಪಿಎಫ್ಐ ಸ್ವಯಂ ಸೇವಕರು ನಡೆಸಿದ ಮಾನವೀಯ ಕಾರ್ಯವನ್ನಂತೂ ಮರೆಯುವಂತಿಲ್ಲ. ಈ ಸಂಬಂಧ ಅಜಾದ್ ಹಿಂದೂ ಸೇನೆಯ ಪೃಥ್ವಿ 'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯಿಸಿ, ಯಾರಿಂದಲೂ ಒಂದು ರೂ. ಪಡೆಯದೇ ನೂರಾರು ಮಂದಿ ಕೋವಿಡ್ ಮೃತರ ಅಂತ್ಯ ಸಂಸ್ಕಾರ ನೆರವೇರಿಸಿದ್ದೇವೆ. ಸಂಕಷ್ಟದ ಸಮಯದಲ್ಲಿ ದೇಶಸೇವೆ ಎಂದೇ ಭಾವಿಸಿ ಈ ಕಾರ್ಯ ನಡೆಸಿದ್ದು ಅವಕಾಶ ಸಿಕ್ಕರೇ ಮುಂದೆಯೂ ಸಹ ಪುಣ್ಯದ ಕಾರ್ಯದಲ್ಲಿ ತೊಡಗಿಕೊಳ್ಳುತ್ತೇನೆ ಎಂದರು.
ಸದ್ಯಕ್ಕಂತೂ ಏಜೆನ್ಸಿ ವತಿಯಿಂದಲೇ ಅಂತ್ಯಸಂಸ್ಕಾರ ನಡೆಯುತ್ತಿದ್ದು, ಹೊರ ಜಿಲ್ಲೆಯ ಆಸ್ಪತ್ರೆಗೆ ದಾಖಲಾಗಿ ಮೃತಪಟ್ಟ ಜಿಲ್ಲೆಯ ಸೋಂಕಿತರ ಅಂತ್ಯಕ್ರಿಯೆಯನ್ನು ಏಜೆನ್ಸಿ ನಡೆಸುತ್ತಿದೆ.